Thursday, October 5, 2023

Avidhava Navami

 

Avidhava Navami Shraddha ----- 7 th October 2023


ಅವಿಧವಾ ನವಮೀ ಶ್ರಾದ್ಧ: ಇದರ ಮಹತ್ವ ಹಾಗೂ ವಿಶೇಷತೆಗಳೇನು

ಇಲ್ಲಿದೆ ಮಾಹಿತಿ----

 


 

ಭಾದ್ರಪದ ಮಾಸದ ಕೃಷ್ಣ ಪಕ್ಷವನ್ನು ಪಿತೃಪಕ್ಷ ಎಂದು ಕರೆಯುತ್ತಾರೆ ಹಾಗೂ ಈ ಪಕ್ಷದ ಅಮಾವಾಸ್ಯೆಯನ್ನು "ಮಹಾಲಯ ಅಮಾವಾಸ್ಯೆ" ಎಂದೂ ಕರೆಯುತ್ತಾರೆ. ಈ ಪಕ್ಷದಲ್ಲಿ ಆಚರಿಸುವಂತಹ ಪಿತೃ ಕಾರ್ಯಗಳು ಪಂಚ ಮಹಾ ಯಜ್ಞಗಳಲ್ಲಿ ಒಂದಾಗಿರುವುದರಿಂದ ಪಿತೃಪಕ್ಷಕ್ಕೆ ಬಹಳ ಮಹತ್ವವನ್ನು ನೀಡಲಾಗುತ್ತದೆ.



ಪಿತೃಪಕ್ಷದ ಒಂಭತ್ತನೇ ದಿನ ಅಂದರೆ ನವಮಿಯಂದು ಮಾಡುವ ಸಂಸ್ಕಾರವೇ ಅವಿಧವಾ ನವಮೀ ಶ್ರಾದ್ಧ. ಪತಿಗಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಈ ದಿನ ಮಾಡಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರಗಳಲ್ಲಿ ಅವಿಧವಾ ನವಮೀ ಶ್ರಾದ್ಧವನ್ನು ಭಾದ್ರಪದ ಕೃಷ್ಣಪಕ್ಷದ ನವಮಿಯಂದು ಮಾಡಿದರೆ, ಉತ್ತರ ಭಾರತದ ಕಡೆ ಅಶ್ವೀಜ ಕೃಷ್ಣಪಕ್ಷದಂದು ಮಾಡುತ್ತಾರೆ.

 


 


ಅವಿಧವಾ ನವಮೀ ಶ್ರಾದ್ಧದ ಮಹತ್ವ

 

ಅವಿಧವಾ ಎಂದರೆ ' ವಿಧವೆಯಲ್ಲದವರು' ಅಂದರೆ 'ಸುಮಂಗಲಿ' ಎಂದರ್ಥ. ಅವಿಧವಾ ನವಮೀ ಶ್ರಾದ್ಧವನ್ನು ಸುಮಂಗಲಿಯಾಗಿ ಮರಣಿಸಿದ ಸ್ತ್ರೀಗೆ ಮಾಡಲಾಗುತ್ತದೆ. ಈ ಆಚರಣೆಯು ಮರಣಾನಂತರ ಸ್ತ್ರೀಯ ಆತ್ಮಕ್ಕೆ ಶಾಂತಿಯನ್ನು ನೀಡುತ್ತದೆ ಹಾಗೂ ಮಡಿದ ಸ್ತ್ರೀಯು ತನ್ನ ವಂಶಕ್ಕೆ ಆಶೀರ್ವಾದ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಅವಿಧವಾ ನವಮೀ ಆರಾಧನೆ ಕಾಲದಲ್ಲಿ ಮಾತೃಃ, ಪಿತಾಮಹಿಃ, ಪ್ರಪಿತಾಮಹಿಃ ಅಂದರೆ ತಾಯಿ - ಅಜ್ಜಿ(ತಂದೆಯ ತಾಯಿ) ಮತ್ತು ಮುತ್ತಜ್ಜಿ(ತಂದೆಯ ಅಜ್ಜಿ) ಈ ಮೂರು ಜನ ಮಾತೆಯರಿಗೆ ನವಮಿಯಂದು ಆರಾಧನೆ ಮಾಡಲಾಗುತ್ತದೆ.



ನವಮಿಯ ದಿನ ಬ್ರಹ್ಮಾಂಡದಲ್ಲಿ ಪೃಥ್ವಿ ಮತ್ತು ಆಪ ತತ್ವಗಳಿಗೆ ಸಂಬಂಧಿಸಿದ ರಜೋಗುಣ ಶಿವಲಹರಿಗಳು ಅಧಿಕವಾಗಿರುತ್ತದೆ. ಈ ಲಹರಿಗಳಿಂದಾಗಿ ಶ್ರಾದ್ಧದಿಂದ ಪ್ರಕ್ಷೇಪಿತವಾಗುವ ಮಂತ್ರೋಚ್ಛಾರಯುಕ್ತ ಲಹರಿಗಳನ್ನು ಶಿವರೂಪದಲ್ಲಿ ಗ್ರಹಿಸುವ ಸೂಕ್ಷ್ಮಬಲವು ಆಯಾಯ ಮುತ್ತೈದೆಯರ ದೇಹಗಳಿಗೆ ಪ್ರಾಪ್ತವಾಗುತ್ತದೆ. ಈ ದಿನ ಮುತ್ತೈದೆಯರಲ್ಲಿರುವ ಶಕ್ತಿ ತತ್ವವು ಸೂಕ್ಷ್ಮ ಶಿವ ತತ್ವದೊಂದಿಗೆ ಬೇಗನೆ ಸಂಯೋಗವಾಗುವುದರಿಂದ ಮುತ್ತೈದೆಯರ ದೇಹವು ಕೂಡಲೇ ಮುಂದಿನ ಗತಿಗೆ ಹೋಗುತ್ತದೆ.



ಈ ಶ್ರಾದ್ಧದ ಕುರಿತು ಎರಡು ವಿವಾದಗಳಿವೆ, ಮೊದಲನೆಯದಾಗಿ ಅವಿಧವಾನವಮಿಯ ಶ್ರಾದ್ಧದಲ್ಲಿ ಫಾತಚತುರ್ದಶಿಯ ಶ್ರಾದ್ಧದಂತೆ ಏಕೋದ್ದಿಷ್ಟ ಶ್ರಾದ್ಧವನ್ನೇ ಮಾಡಬೇಕು, ಪಾರ್ವಣವನ್ನು ಮಾಡಬಾರದು ಎನ್ನುವುದು ಒಂದಾದರೆ, ಎರಡನೆಯದಾಗಿ ಗಂಡ ಬದುಕಿರುವವರೆಗೆ ಅವಿಧವಾ ನವಮೀ, ಗಂಡ ಸತ್ತ ಬಳಿಕ ಅವಿಧವಾನವಮಿ ಮಾಡಲು ಬರುವುದಿಲ್ಲ ಎನ್ನುವ ವಿವಾದವಿದೆ.

 

ಏಕೋದ್ದಿಷ್ಟ: ಏಕೋದ್ದಿಷ್ಟ ಎಂದರೆ ಯಾರ ಕುರಿತು ಶ್ರಾದ್ಧವಿರುತ್ತದೆಯೋ ಅವರಿಗೆ ಮಾತ್ರ ಶ್ರಾದ್ಧ. ಕೇವಲ ಒಂದೇ ಪಿಂಡವನ್ನಿಟ್ಟು ಶ್ರಾದ್ಧ ಮಾಡುವುದು. ಅಂದರೆ ಮುತ್ತೈದೆಯಾಗಿ ಯಾರು ಸತ್ತಿದ್ದಾರೋ ಅವರಿಗೆ ಮಾತ್ರ ಶ್ರಾದ್ಧ. ಸರಳವಾಗಿ ಹೇಳುವುದಾದರೆ ಒಂದು ಪಿಂಡವನ್ನಿಟ್ಟು ಒಬ್ಬರಿಗೆ ಮಾತ್ರ ಶ್ರಾದ್ಧ ಮಾಡುವುದು.



ಪಾರ್ವಣ ಎಂದರೆ ಸತ್ತಿರುವ ಮುತ್ತೈದೆ, ಅವರ ಅತ್ತೆ (ಅಂದರೆ ಮಗ ತಾಯಿಯ ಶ್ರಾದ್ಧ ಮಾಡುತ್ತಿದ್ದರೆ, ತಾಯಿ, ಅಜ್ಜಿ, ಮುತ್ತಜ್ಜಿ) ಈ ಮೂರೂ ಜನರಿಗೂ ಶ್ರಾದ್ಧವನ್ನು ಮಾಡಲಾಗುತ್ತದೆ. ಅಂದರೆ ಸತ್ತ ವ್ಯಕ್ತಿಯ ತಂದೆಯ ಅತ್ತೆ, ಅವರ ತಂದೆಯ ಅತ್ತೆ ಈ ಮೂರೂ ಜನರಿಗೆ ಮೂರು ಪಿಂಡಗಳನ್ನು ಸಮರ್ಪಿಸಿ ಶ್ರಾದ್ಧ ಮಾಡುವುದು ಪಾರ್ವಣ.

 


 

ಶ್ರೀ ವಾದಿರಾಜರು ಹೇಳುವ ಪ್ರಕಾರ, ಧರ್ಮಶಾಸ್ತ್ರದ ಆಚರಣೆಗಳನ್ನು ಯುಕ್ತಿಯಿಂದ ನಿರ್ಧರಿಸಬಾರದು ಎಂದು, ಆದರೆ ಅವಿಧವಾನವಮಿಯ ವಿಷಯದಲ್ಲಿ ಧರ್ಮಸಿಂಧುವಿನಲ್ಲಿಯೂ ಸಹ ಕೇವಲ ಯುಕ್ತಿಯಿಂದಲೇ ಆಚರಣೆಯನ್ನು ಸಾಧಿಸಲಾಗಿದೆ. ಈ ದಿನವೂ ಕೂಡ ಧರ್ಮಶಾಸ್ತ್ರವನ್ನು ಓದದೆಯೇ ಜನ ಕೇವಲ ಯುಕ್ತಿಯಿಂದ ಇದರ ಕುರಿತು ಮಾತನಾಡುತ್ತಾರೆ.



ಯುಕ್ತಿಯ ಪ್ರಕಾರ ಘಾತಚತುರ್ದಶಿಯಂದು ಒಂದೇ ಪಿಂಡವನ್ನಿಟ್ಟು ಶ್ರಾದ್ಧ ಮಾಡಬೇಕು ಎಂಬ ವಿಧಿ ಇದೆ. ಯಾರು ದುರ್ಮರಣ ಹೊಂದಿರುತ್ತಾರೆಯೋ ಅವರಿಗೆ ಮಾತ್ರ ಶ್ರಾದ್ಧ. ಹಾಗೆ ನಮ್ಮ ತಾಯಿ ಮಾತ್ರ ಮುತ್ತೈದೆಯಾಗಿ ಸಾವನ್ನು ಪಡೆದಿರಬಹುದು, ಆದರೆ ನಮ್ಮ ಅಜ್ಜಿಗೆ ಆ ರೀತಿಯಲ್ಲಿ ಸಾವು ಬಂದಿಲ್ಲದಿರಬಹುದು. ಪಾರ್ವಣವಾದರೆ ಮೂರೂ ಜನರಿಗೂ ಪಿಂಡವನ್ನಿಡಲೇಬೇಕು. ಆಗ ಅಜ್ಜಿ, ಮುತ್ತಜ್ಜಿಯರು ಮುತ್ತೈದೆಯಾಗಿ ಸಾವನ್ನು ಪಡೆಯದೇ ಇದ್ದರೆ ನಾವು ಮಾಡುವ ಶ್ರಾದ್ಧ 'ಅವಿಧವಾ'ನವಮಿ ಹೇಗಾಗುತ್ತದೆ ಎನ್ನುವುದು.



ಹಾಗಾದರೆ ತಾಯಿ, ಅಜ್ಜಿ, ಮುತ್ತಜ್ಜಿ ಮೂರು ಜನ ಮುತ್ತೈದೆ ಸಾವನ್ನು ಪಡೆದಿದ್ದರೆ ಆಗ ಅವಿಧವಾನವಮಿಯನ್ನು ಪಾರ್ವಣದ ರೀತಿಯಲ್ಲಿ ಮಾಡಬಹುದೇ ಎಂದರೆ ಅದನ್ನೂ ಅವರು ಒಪ್ಪುವುದಿಲ್ಲ, ಕಾರಣ ಅವಿಧವಾನವಮಿ ಗಂಡ ಬದುಕಿರುವರೆಗೆ ಮಾತ್ರ , ಗಂಡ ಸತ್ತ ಬಳಿಕ ಅವಿಧವಾನವಮಿ ಮಾಡುವ ಹಾಗಿಲ್ಲ ಎಂದು. ಅಂದರೆ ತಂದೆ ಬದುಕಿದ್ದಾರೆ, ತಾಯಿ ತೀರಿಕೊಂಡಿದ್ದಾರೆ, ತಾಯಿಯ ಅವಿಧವಾ ನವಮೀ ಶ್ರಾದ್ಧವನ್ನು ಮಗ ಮಾಡುತ್ತಾನೆ. ಮುಂದೊಂದು ದಿನ ತಂದೆ ತೀರಿಹೋಗುತ್ತಾರೆ. ಆ ಬಳಿಕ ಮಗ ತಾಯಿಯ ಅವಿಧವಾ ನವಮೀಯ ಶ್ರಾದ್ಧವನ್ನು ಮಾಡುವ ಹಾಗಿಲ್ಲವೆನ್ನುವುದು ವಿವಾದ.



ಹೀಗಾಗಿ ತಾಯಿ, ಅಜ್ಜಿ, ಮುತ್ತಜ್ಜಿ ಮೂರೂ ಜನ ಮುತ್ತೈದೆಯರಾಗಿ ಸಾವನ್ನು ಪಡೆದಿದ್ದರೂ, ಅಜ್ಜ ಮುತ್ತಜ್ಜರು ಸತ್ತು ಹೋಗಿರುತ್ತಾರೆಯಾದುದರಿಂದ ಅವರಿಗೆ ಅವಿಧವಾನವಮಿಯ ಶ್ರಾದ್ಧವನ್ನು ಮಾಡಲಾಗುವುದಿಲ್ಲ. ಅದಕ್ಕಾಗಿ ಏಕೋದ್ದಿಷ್ಟ ಅಂದರೆ ಒಂದು ಪಿಂಡವನ್ನು ಒಬ್ಬರಿಗೆ ಮಾತ್ರ ಇಟ್ಟು ಶ್ರಾದ್ಧ ಮಾಡಬೇಕು, ಪಾರ್ವಣವನ್ನಲ್ಲ ಎನ್ನುವುದು ವಿವಾದದ ಸಾರಾಂಶ.



ಅವಿಧವಾ ನವಮಿ ಎನ್ನುವುದು ಪೂರ್ಣವಾಗಿ ಮಹಾಲಯದ ಅಂಗವಲ್ಲ. ಇದನ್ನು ಮೂಲತಃ ಅನ್ವಷ್ಟಕಾ ಶ್ರಾದ್ಧ ಎನ್ನುತ್ತಾರೆ. ಅಷ್ಟಕಾ ಎಂದರೆ ಅಷ್ಟಮಿಯಂದು ಮಾಡುವ ಶ್ರಾದ್ಧ. ಅನ್ವಷ್ಟಕಾ ಶ್ರಾದ್ಧವೆಂದರೆ ನವಮಿಯಂದು ಮಾಡುವ ಶ್ರಾದ್ಧ. ಮಹಾಲಯದಲ್ಲಿ ಬರುವ ನವಮಿಯಂದು ಮಾಡುವ ಅನ್ವಷ್ಟಕಾಶ್ರಾದ್ಧಕ್ಕೆ ಅವಿಧವಾನವಮೀ ಎಂದು ಹೆಸರು.



ಅಷ್ಟಕಾಶ್ರಾದ್ಧಗಳಲ್ಲಿ ಪಾರ್ವಣದ ರೀತಿಯಲ್ಲೇ ಶ್ರಾದ್ಧ ಮಾಡುತ್ತಾರೆ. ಅನ್ವಷ್ಟಕಾಶ್ರಾದ್ಧದಲ್ಲಿ ಕೂಡ ಮೂರು ಪಿಂಡಗಳನ್ನಿಟ್ಟೇ ಶ್ರಾದ್ಧ ಮಾಡಬೇಕು. ಮಾರ್ಗಶೀರ್ಷ, ಪುಷ್ಯ, ಮಾಘ ಮತ್ತು ಫಾಲ್ಗುಣಗಳಲ್ಲಿ ತಾಯಿಗೆ ಮುತ್ತೈದೆ ಸಾವು ಬರದಿದ್ದರೂ ಶ್ರಾದ್ಧವನ್ನು ಮಾಡಬೇಕು. ಭಾದ್ರಪದದಲ್ಲಿ ಮಾತ್ರ ತಾಯಿ ಮುತ್ತೈದೆಯಾಗಿ ಸತ್ತಿದ್ದರೆ ಆ ದಿನ ಸುವಾಸಿನಿಯರನ್ನು ಕರೆಯಿಸಿ, ಭೋಜನವನ್ನು ಮಾಡಿಸಿ, ಸೌಭಾಗ್ಯ ಪದಾರ್ಥಗಳನ್ನು ದಾನ ಮಾಡಿ ಶ್ರಾದ್ಧ ಮಾಡಬೇಕು.



ಇನ್ನೊಂದು ವಿವಾದವೆಂದರೆ, ಮುತ್ತೈದೆ ಸಾವು ಪಡೆದವರಿಗೆ ಗಂಡ ಸತ್ತ ನಂತರ ಅವಿಧವಾನವಮಿ ಇಲ್ಲ ಎನ್ನುವ ವಿವಾದ. ಜೀವದ ಸಂಬಂಧವನ್ನು ತೆಗೆದುಕೊಂಡರೆ ಜೀವಗಳಿಗೆ ಸಾವೇ ಇಲ್ಲ. ಹೀಗಾಗಿ ದೇಹದ ಮುತ್ತೈದೆಸಾವು ಎನ್ನುವ ಗುಣ ಆ ದೇಹದ ಶಾಶ್ವತ ಗುಣವಾಯಿತು ಎನ್ನಲಾಗುತ್ತದೆ.



ಪ್ರಹ್ಲಾದ ಮುಂದೆ ಎಷ್ಟು ಜನ್ಮ ಎತ್ತಿದರೂ ಮುಂದೊಂದು ದಿನ ಅವನ ದೇಹ ವಿನಾಶವಾದರೂ ಅವನ ಆ ಜನ್ಮದ 'ಹಿರಣ್ಯಕಶಿಪುವಿನ ಮಗ' ಎಂಬ ಗುಣ ಹೇಗೆ ಹೋಗುವುದಿಲ್ಲವೋ ಹಾಗೆ '' ಗಂಡನಿಗಿಂತ ಮೊದಲೇ ಸತ್ತದ್ದು'' ಎಂಬ ಗುಣವೂ ಹೋಗುವುದಿಲ್ಲ. ವೈಧವ್ಯ ಎಂದರೆ ಗಂಡ ಸತ್ತ ಬಳಿಕವೂ ಬದುಕಿರುವುದು, ಅದು ಆಕೆಗೆ ಅನ್ವಯವಾಗುವುದಿಲ್ಲ. ಹೀಗಾಗಿ ಒಮ್ಮೆ ಮುತ್ತೈದೆಯಾಗಿ ಸತ್ತರೆ ಮಗ ತಾನು ಸಾಯುವವರೆಗೆ ಆಕೆ ಅವಿಧವಾನವಮೀ ಶ್ರಾದ್ಧವನ್ನು ಮಾಡಲೇಬೇಕು. ಒಂದು ಶ್ರಾದ್ಧ ನಿಲ್ಲುವುದು ಅದನ್ನು ಮಾಡುವ ಕರ್ತೃ ಸತ್ತಾಗ ಮಾತ್ರ . ಬೇರೆ ಯಾವ ಸಂದರ್ಭದಲ್ಲಿಯೂ ಸಹ ಶ್ರಾದ್ಧ ನಿಲ್ಲುವುದಿಲ್ಲ.


ಹೀಗಾಗಿ ಯಾವ ಕಾರಣದಿಂದಲೂ ಗಂಡ ಸತ್ತ ಬಳಿಕ ಅವಿಧವಾನವಮೀ ಶ್ರಾದ್ಧವನ್ನು ನಿಲ್ಲಿಸಬೇಕೆಂಬ ನಿಯಮ ಒಪ್ಪಲು ಸಾಧ್ಯವಿಲ್ಲ. ಅದನ್ನು ಮಾಡುವ ಕರ್ತೃ ಇರುವವರೆಗೆ ಆ ಶ್ರಾದ್ಧವನ್ನು ಮಾಡಬೇಕು. ಅವಿಧವಾನವಮೀ ಅನ್ವಷ್ಟಕಾಶ್ರಾದ್ಧವಾದ್ದರಿಂದ ಆ ಶ್ರಾದ್ಧದ ದಿನ ತಾಯಿ, ಅಜ್ಜಿ, ಮುತ್ತಜ್ಜಿ ಮೂರೂ ಜನರಿಗೂ ಪಿಂಡವನ್ನಿಟ್ಟು ಶ್ರಾದ್ಧವನ್ನು ಮಾಡಬೇಕು. ಏಕೋದ್ದಿಷ್ಟ ಶ್ರಾದ್ಧವನ್ನು ಮಾಡಬಾರದು.

 

 


ಅವಿಧವಾನವಮಿಯ ವಿಶೇಷತೆ


ಈ ಶ್ರಾದ್ಧದಲ್ಲಿ ಮುತ್ತೈದೆಯರನ್ನು ಭೋಜನಕ್ಕೆ ಆಹ್ವಾನಿಸಬೇಕು
ಆಮಂತ್ರಿತರಾದ ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಸೀರೆ, ಕುಪ್ಪುಸ ಮುಂತಾದ ಸೌಭಾಗ್ಯಪದಾರ್ಥಗಳನ್ನು ಬಾಗಿನ ನೀಡಬೇಕು.


ಅವಿಧವಾ ನವಮೀಯಲ್ಲಿ ಪಿತೃಶ್ರಾದ್ಧಕ್ಕೆ ಸಿದ್ಧಪಡಿಸುವ ರವೆ ಉಂಡೆ ಮತ್ತು ವಡೆಗಳನ್ನು ನಿಷೇಧಿಸಲಾಗಿದೆ ಸಾಧ್ಯವಾದಲ್ಲಿ ಬೆಳ್ಳಿ, ಬಂಗಾರದ ಆಭರಣಗಳನ್ನು ವಿಷ್ಣುಭಕ್ತರಾದ ಶ್ರೇಷ್ಠಗುಣಗಳ ಮುತ್ತೈದೆಯರಿಗೆ ದಾನ ನೀಡಿ ಜನ್ಮವಿತ್ತ ತಾಯಿಗೆ ಜನ್ಮಜನ್ಮಗಳಲ್ಲಿಯೂ ಸಕಲ ಸೌಭಾಗ್ಯವಿರಲಿ ಎಂದು ಪ್ರಾರ್ಥಿಸಬೇಕು.


ಅವಿಧವಾ ನವಮಿಯನ್ನು ಹಬ್ಬವೆಂದೇ ಪರಿಗಣಿಸಲಾಗುವುದರಿಂದ ಹಬ್ಬದ ಅಡುಗೆ ಎಂದರೆ, ಬೇಸನ್‌ ಲಡ್ಡು, ಜಿಲೇಬಿ, ಹೋಳಿಗೆ, ಶ್ಯಾವಿಗೆ ಪಾಯಸ, ಮಂಡಿಗೆ ಹಾಗೂ ಬೂಂದಿ ಲಾಡು ಮಾಡಲಾಗುತ್ತದೆ


ಅವಿಧವಾ ನವಮಿ ಶ್ರಾದ್ಧದಲ್ಲಿ ತಾಯಿಯ ಪಿಂಡಕ್ಕೆ ಅರಿಶಿನ ಕುಂಕುಮಗಳನ್ನು ಅರ್ಪಿಸುವ ಪದ್ಧತಿಯೂ ಇದೆ.‌


ನವಮೀ ಶ್ರಾದ್ಧ ‌ ಶನಿವಾರ, ಅಕ್ಟೋಬರ್ 7, 2023 ‌

ನವಮಿ ತಿಥಿ ಪ್ರಾರಂಭ : ಶನಿವಾರ ಅಕ್ಟೋಬರ್ 7 ಹಗಲು ‌08:07 ಗಂಟೆಗೆ ನವಮಿ ತಿಥಿ ಅಂತ್ಯ : ರವಿವಾರ ಅಕ್ಟೋಬರ್ 8 ಹಗಲು ‌10:12 ಗಂಟೆಯವರೆಗೆ ‌ ‌ ‌ ‌ ಕುಟುಪ್ ಮುಹೂರ್ತ : 11:44 am ರಿಂದ 12:31 pm ‌ ‌ ರೋಹಿಣ ಮುಹೂರ್ತ : 12:31 pm ರಿಂದ 01:19 pm

ಅಪರಾಹ್ನ ಮುಹೂರ್ತ : 01:19 pm ರಿಂದ 03:42 pm


----------- Hari Om ----------



No comments:

Post a Comment