Saturday, November 17, 2018

Deepavali - The Festival Of Lights

  Festival of Lights
 

Deepavali – Festival of Lights 
 

ದೀಪಗಳ ಹಬ್ಬ ದೀಪಾವಳಿಯ ಬಗ್ಗೆ ಒಂದು ಕಿರು ಮಾಹಿತಿ

ದೀಪಾವಳಿ - ಹೆಸರೇ ಹೇಳುವಂತೆ ದೀಪಗಳ ಸಮೂಹ.

ಮನೆಯ ತುಂಬ ಪ್ರಣತಿಗಳನ್ನು ಹಚ್ಚಿ ಅದರ ನಗುವಿನಲ್ಲಿ ನಾವು ನಗುತ್ತಾ ಸಂಭ್ರಮಿಸುವುದು.

♦"
ದೀಪಯತಿ ಸ್ವಂ ಪರಚ ಇತಿ ದೀಪ:" - ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕಿದೆ.

ತಮಸೋಮಾ ಜ್ಯೋತಿರ್ಗಮಯ ಎಂಬಮಾತಿನ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪ.

ಅಂತರಂಗದಲ್ಲಿರುವ ಕತ್ತಲೆಯನ್ನೋಡಿಸಿ, ಬೆಳಕಿನ ಪ್ರಣತಿಯ ಹಚ್ಚಿ ದೀಪ ಬೆಳಗಿಸುವ ಮೂಲಕ ಮನೆ ಮನಬೆಳಗುವ ದಿವ್ಯ ಜ್ಯೋತಿಯ ಹಬ್ಬ ದೀಪಾವಳಿ...

ಎಲ್ಲೆಲ್ಲೂ ಜ್ಞಾನ, ನಿರ್ಮಲ ಆನಂದ, ಶುದ್ಧ ಮನಸ್ಸಿನ ಪ್ರೀತಿಯ ಬೆಳಗಿಸುವ ಸಂಕೇತವಾಗಿ ಆಚರಿಸಲ್ಪಡುವ ಹಬ್ಬ ದೀಪಾವಳಿ.

ದೀಪಾವಳಿಯನ್ನು ಐದು ದಿನಗಳ ಹಬ್ಬವನ್ನಾಗಿ,ಸಾಂಪ್ರದಾಯಿಕವಾಗಿ ಆಚರಿಸುತ್ತೇವೆ.

ಆಶ್ವಯುಜದ ಕೊನೆ ಮತ್ತು ಕಾರ್ತೀಕ ಮಾಸದ ಆರಂಭದ ದಿನಗಳಲ್ಲಿಅದ್ಧೂರಿಯ ಆಚರಣೆ... ತ್ರಯೋದಶಿ
 ♈ಹಬ್ಬದ ಮೊದಲ ದಿನ.

ದೀಪಾವಳಿ ಹಬ್ಬವನ್ನು ಶ್ರೀ ರಾಮಚಂದ್ರನು ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಬಂದ ದಿನ ವೆಂದೂ..., ಶ್ರೀ ಕೃಷ್ಣನು ನರಕಾಸುರನನ್ನು ಕೊಂದ ದಿನ ವೆಂದೂ ಆಚರಿಸುತ್ತಾರೆ.

ದೀಪೇನ ಲೋಕಾನ್ ಜಯತಿ ದೀಪಸ್ತೇಜೋಮಯ:
ಸ್ಮೃತ: |
ಚರುರ್ವರ್ಗಪ್ರದೋ ದೀಪಸ್ತಸ್ಮಾದ್ ದೀಪೈರ್ಯಜೇತ್ಪ್ರಿಯೇ ||

ತೇಜೋಮಯವಾದ ದೀಪವು ಧರ್ಮ, ಅರ್ಥ, ಕಾಮ,ಮೋಕ್ಷ ರೂಪವಾದ ಚರುರ್ವರ್ಗಪ್ರದವಾಗಿದೆ ಹಾಗೂ ದೀಪವನ್ನು ಬೆಳಗಿಸು ಎಂದು ಈ ಶ್ಲೋಕವು ಸಾರುತ್ತದೆ.

ನರಕ ಚತುರ್ದಶಿಯು ದೀಪಾವಳಿಯ ಪ್ರಮುಖ ದಿನ

ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನು ಶಾಸ್ತ್ರವು ಹೇಳಿರುತ್ತದೆ.

ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಲ್ಯಾಂ ಚತುರ್ದಶಿ |
ಪ್ರಾತ: ಸ್ನಾನಂ ತು ಯ: ಕುರ್ಯಾದ್ಯಮಲೋಕಂ ನ ಪಶ್ಯತಿ||

ತೈಲದಲ್ಲಿ ಲಕ್ಷ್ಮೀದೇವಿಯೂ, ನೀರಿನಲ್ಲಿ ಗಂಗೆಯೂ ದೀಪಾವಳಿಯ ಚತುರ್ದಶಿಯಂದು ವಿಶೇಷವಾಗಿ ಸನ್ನಿಹಿತರಾಗಿರುತ್ತಾರೆ ಎಂದು ಶಾಸ್ತ್ರ ತಿಳಿಸುತ್ತದೆ.

ಅಂದು ಬೆಳಿಗ್ಗೆ ಸುಮಂಗಲೆಯರಿಂದ ತೈಲವನ್ನು ಹಚ್ಚಿಸಿಕೊಂಡುಆರತಿ ಮಾಡಿಸಿಕೊಳ್ಳುವುದು ನಂತರ ಅಭ್ಯಂಜನವನ್ನುಮಾಡುವುದು ಈ ಹಬ್ಬದ ಪ್ರಮುಖ ಅಂಗ.

ಅಭ್ಯಂಗನ ಸ್ನಾನದ ನಂತರ ಹೊಸ ಬಟ್ಟೆ ಧರಿಸಿ, ಮನೆಯ ಹಿರಿಯರಿಗೆ ನಮಸ್ಕರಿಸಿ, ಸಿಹಿ ತಿಂದು ಪಟಾಕಿ ಹಚ್ಚುತ್ತಾರೆ

ಮಕ್ಕಳು.....ಅಷ್ಟೇ ಅಲ್ಲದೆ ಅಂದು ನರಕಾಸುರನ ಸಂಹಾರ ಮಾಡಿಬಂದ ಕೃಷ್ಣನಿಗೆ ಸುಮಂಗಲೆಯರು ಆರತಿ ಬೆಳಗುತ್ತಾರೆ.

ಆ ಪದ್ಧತಿಯಂತೆ ಇಂದಿಗೂ ಆರತಿ ಮಾಡುವುದು ಸಂಪ್ರದಾಯದಂತೆ ಬೆಳೆದು ಬಂದಿದೆ.

ಮೂರನೆಯ ದಿನ ಸಾಯಂಕಾಲ ಅಮಾವಾಸ್ಯೆಯಂದು ರಾತ್ರಿ ಮನೆಯಲ್ಲಿನ ಅಲಕ್ಷ್ಮಿಯನ್ನು ಹೊರಹಾಕುವಉದ್ದೇಶದಿಂದ ಲಕ್ಷ್ಮೀ ಪೂಜೆಯನ್ನು ಮಾಡಿ,
ಮನೆಯ ತುಂಬ ದೀಪವನ್ನು ಬೆಳಗಬೇಕೆಂದು ಕೂಡ ಶಾಸ್ತ್ರ ತಿಳಿಸುತ್ತದೆ. ಈ ದಿನ ತುಂಬಾ ಪ್ರಶಸ್ತವಾದ ದಿನಲಕ್ಷ್ಮೀ ಪೂಜೆಗೆ.

ಇದು ಶ್ರೀ ಕೃಷ್ಣನು ದೇಹತ್ಯಾಗ ಮಾಡಿದ ದಿನ ವೆಂದೂ , ನಚೀಕೇತನಿಗೆ ಆತ್ಮ ಸಾಕ್ಷಾತ್ಕಾರ ವಾದ ದಿನವೆಂದೂ ಹೇಳುತ್ತಾರೆ.

ನಾಲ್ಕನೆಯ ದಿನವನ್ನು ಬಲಿ ಪಾಡ್ಯಮಿ ಎಂದುಕರೆಯುತ್ತಾರೆ.

ವಿಷ್ಣು ಪುರಾಣದ ಪ್ರಕಾರ ಶ್ರೀ ಕೃಷ್ಣನುಗೋವರ್ಧನಗಿರಿಯನ್ನು ಎತ್ತಿದ್ದು ಇದೇ ದಿನವಂತೆ.

ಆದ್ದರಿಂದ ಈ ದಿನ ಗೋಪೂಜೆ ಹಾಗೂ ಗೋವರ್ಧನನ ಪೂಜೆಗೆ ಮಹತ್ವ.

ಮನೆಯಲ್ಲಿನ ಎತ್ತುಗಳಿಗೂ ಪೂಜೆ,ಸ್ನಾನ ಮಾಡಿಸಿ, ಅರಿಸಿನ ಕುಂಕುಮ ಹಚ್ಚಿ, ಕೊಂಬಿಗೆ ಸೇವಂತಿಗೆ, ಚಂಡು ಹೂಗಳನ್ನು ಸುತ್ತಿ ಪೂಜಿಸುತ್ತಾರೆ.

ಎತ್ತುಗಳ ಮೆರವಣಿಗೆ ಕೂಡ ಮಾಡುತ್ತಾರೆ ಗದ್ದೆಗಳಲ್ಲಿ, ಹೊಲಗಳಲ್ಲಿ ಧಾನ್ಯಲಕ್ಷ್ಮಿಯ ಪೂಜೆಯನ್ನೂ ಮಾಡುತ್ತಾರೆ.

ಹಾಗೇ ಈ ದಿನ ಮಹಾಬಲಿ ಭೂಮಿಗೆ ಬರುತ್ತಾನೆಂಬುದೂ ಒಂದು ನಂಬಿಕೆ.

ಹೊಲ, ಗದ್ದೆಗಳಲ್ಲಿ ಬಲೀಂದ್ರನ ಸ್ಮರಣಾರ್ಥ ದೀಪಗಳನ್ನು ಕೂಡ ಹಚ್ಚಿಡುತ್ತಾರೆ.

ಐದನೆಯ ದಿನವನ್ನು ಯಮ ದ್ವಿತೀಯ ಅಥವಾ ಭ್ರಾತೃ ದ್ವಿತೀಯಾ ಎಂದು ಆಚರಿಸುತ್ತಾರೆ.

ಈ ದಿನ ಯಮ ತನ್ನತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ.

ತಂಗಿ ಅಣ್ಣನಿಗೆ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುತ್ತಾಳೆಂಬ ಪ್ರತೀತಿ.

ಈ ರೀತಿ ನಮ್ಮ ಸಂಸ್ಕೃತಿಯ ಸೊಬಗನ್ನು ನಾವು ಅರಿತು ಶ್ರದ್ಧೆಯಿಂದ ಆಚರಿಸಿದರೆ ಈ ಸಡಗರದ-ಸಂಭ್ರಮದ ಹಬ್ಬಗಳು ಅರ್ಥಪೂರ್ಣವೆನಿಸುತ್ತವೆ ಮತ್ತು ಸಂಭ್ರಮದ,ಸಡಗರದ ವಾತಾವರಣ
ಮನೆಯಲ್ಲಿ ಧನಾತ್ಮಕ ತರಂಗ ಗಳನ್ನು ಆಹ್ವಾನಿಸುತ್ತದೆ

ಸರ್ವೇಜನ ಸುಖಿನೋಭವಂತು  ------  Hari Om ------

No comments:

Post a Comment