Tuesday, November 20, 2018

Bali Padyami

Importance of Bali Padyami

 
ಬಲಿಪಾಡ್ಯಮಿ

ಸಮುದ್ರಮಥನದ ಸಮಯದಲ್ಲಿ ಅಮೃತದ ಆಸೆಯಿಂದ ರಾಕ್ಷಸರೂ ದೇವತೆಗಳಷ್ಟೇ ಕಷ್ಟಪಟ್ಟು ದುಡಿದರೂ ಶ್ರೀಹರಿಯ ಮಾಯೆಯಿಂದ ಅದು ದೇವತೆಗಳಿಗೆ ಮಾತ್ರ ಸಿಕ್ಕಿತು. ಆಶಾಭಂಗವನ್ನು ಹೊಂದಿದ ರಾಕ್ಷಸರು ಅತ್ಯಂತ ಕ್ರೋಧದಿಂದ ದೇವತೆಗಳ ಮೇಲೆ ಯುದ್ಧವನ್ನು ಹೂಡಿದರು. ರಾಕ್ಷಸರಾಜನಾದ ಬಲೀಂದ್ರ ಮಾಯಾವಿಮಾನವನ್ನೇರಿ ಮಾಯಾಯುದ್ಧವನ್ನೇ ಹೂಡಿದನು. ಇದನ್ನು ಎದುರಿಸಲಾರದ ದೇವತೆಗಳು ಶ್ರೀಹರಿಯ ಮೊರೆಹೋಗುವಂತಾಯ್ತು. ಶ್ರೀಹರಿಯ ಕೃಪೆಯಿಂದ ಮಾಯೆ ಹರಿದುಹೋದಾಗ ಬಲೀಂದ್ರನನ್ನು ಇಂದ್ರನು ಕೊಂದುಹಾಕಿದನು.

ಬಲೀಂದ್ರನು ಯುದ್ಧದಲ್ಲಿ ಸತ್ತುದನ್ನು ಕಂಡು ದೇವತೆಗಳ ಧೈರ್ಯ ಇಮ್ಮಡಿಯಾಯಿತು. ಅವರು ರಾಕ್ಷಸರನ್ನು ಹುಳುಗಳಂತೆ ಹೊಸಕಿಹಾಕುವುದಕ್ಕೆ ಪ್ರಾರಂಭಿಸಿದರು. ಆ ವೇಳೆಗೆ ನಾರದರು ಅಲ್ಲಿ ಕಾಣಿಸಿಕೊಂಡು “ಅಯ್ಯಾ ದೇವತೆಗಳೇ, ಬ್ರಹ್ಮದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ. ನೀವು ಅಮೃತ ಪಡೆದಾಯಿತು. ಸಕಲ ಐಶ್ವರ್ಯವನ್ನೂ ಪಡೆದಾಯಿತು. ಹೀಗಿದ್ದರೂ ಯುದ್ಧ ಮಾಡುವುದು ಸರಿಯಲ್ಲ” ಎಂದು ನುಡಿದರು. ಹೀಗೆ ದೇವತೆಗಳು ಸ್ವರ್ಗಕ್ಕೆ ಹಿಂದಿರುಗಿದರು. ರಾಕ್ಷಸರು ನಾರದಮುನಿಯ ಅಪ್ಪಣೆಯಂತೆ ಬಲೀಂದ್ರನ ದೇಹವನ್ನು ಹೊತ್ತುಕೊಂಡು ತಮ್ಮ ಸ್ವಸ್ಥಾನವಾದ ಆಸ್ತಗಿರಿಗೆ ಹಿಂದಿರುಗಿದರು. ಅಲ್ಲಿ ರಾಕ್ಷಸರ ಪುರೋಹಿತರಾದ ಶುಕ್ರಾಚಾರ್ಯರು ಸತ್ತ ಬಲೀಂದ್ರನನ್ನು ತಮ್ಮ ಸಂಜೀವಿನೀ ವಿದ್ಯೆಯಿಂದ ಮತ್ತೆ ಬದುಕಿಸಿದರು. ಅವರ ಉಪಚಾರದಿಂದ ಆ ರಾಕ್ಷಸ ರಾಜನಿಗೆ ಮತ್ತೆ ದೇಹಶಕ್ತಿ, ಜ್ಞಾಪಕಶಕ್ತಿಗಳು ಎಂದಿನಂತೆ ಬಂದವು. ಮಹಾಜ್ಞಾನಿಯಾದ ಬಲೀಂದ್ರನು ‘ಸೋಲು ಗೆಲುವು, ಸುಖ ದುಃಖ – ಇವೆಲ್ಲಾ ಪೂರ್ವಜನ್ಮದ ಕರ್ಮ’ ಎಂದುಕೊಂಡು ಸಮಾಧಾನವನ್ನು ವಹಿಸಿದನು.

ಮುಂದೆ ಶುಕ್ರಾಚಾರ್ಯರ ಬೆಂಬಲದಿಂದ ಬಲೀಂದ್ರನು ‘ವಿಶ್ವಜಿತ್’ ಯಾಗವನ್ನು ಮಾಡಿ ಅಜೇಯನಾಗಿ ಪುನಃ ಸ್ವರ್ಗಲೋಕದ ಮೇಲೆ ದಂಡೆತ್ತಿ ಹೋದನು. ಬಲೀಂದ್ರನ ಶಂಖ ದ್ವನಿಯನ್ನು ಕೇಳಿಯೇ ಸರ್ಗಲೋಕ ನಡುಗಿಹೋಯಿತು. ದೇವಗುರು ಬ್ರಹಸ್ಪತಿ ಇಂದ್ರನಿಗೆ ಹೇಳಿದರು: ‘ಅಯ್ಯಾ, ಶುಕ್ರಾಚಾರ್ಯರು ತಮ್ಮ ತಪಸ್ಸನ್ನು ಇವನಲ್ಲಿ ತುಂಬಿ ಕಳುಹಿಸಿದ್ದಾರೆ. ಶ್ರೀಹರಿಯೊಬ್ಬನ ಹೊರತು ಮತ್ತಾರೂ ಈಗ ಇವನನ್ನು ಎದುರಿಸಲಾರರು. ನೀನು ನಿನ್ನ ಅನುಯಾಯಿಗಳೊಂದಿಗೆ ತಲೆ ಮರೆಸಿಕೊಳ್ಳುವುದೊಂದೇ ಉಪಾಯ”. ಹೀಗೆ ಬಲೀಂದ್ರನು ಸ್ವರ್ಗಲೋಕವನ್ನೂ ಆಕ್ರಮಿಸಿಕೊಂಡ.

ದೇವತೆಗಳ ಮಾತೆಯಾದ ಅದಿತಿದೇವಿಯು ತನ್ನ ಪತಿ ಕಶ್ಯಪರನ್ನು ತನ್ನ ಮಕ್ಕಳಿಗೆ ರಾಜ್ಯವನ್ನು ಕೊಡಿಸಿಕೊಡು ಎಂದು ಬೇಡಿಕೊಂಡಾಗ ಅವರು ಶ್ರೀಹರಿಯನ್ನು ಕುರಿತು ವ್ರತವನ್ನು ಆಚರಿಸುವಂತೆ ಉಪದೇಶಿಸಿದರು. ಅದಿತಿಯ ಭಕ್ತಿಗಳಿಗೆ ಮೆಚ್ಚಿದ ಶ್ರೀಹರಿಯು ಆಕೆಗೆ ಪ್ರತ್ಯಕ್ಷನಾಗಿ “ಅಮ್ಮ, ದೇವಮಾತೆ, ನಿನ್ನ ಬಯಕೆ ಏನೆಂಬುದು ನನಗೆ ಗೊತ್ತು. ನಾನು ನಿನ್ನ ಗಂಡನ ತಪಸ್ಸಿನಲ್ಲಿ ನೆಲೆಸಿ, ನಿನ್ನಲ್ಲಿ ಮಗನಾಗಿ ಹುಟ್ಟುತ್ತೇನೆ. ಆಗ ನಿನ್ನ ಮಕ್ಕಳನ್ನು ಕಾಪಾಡುತ್ತೇನೆ. ನೀನು ಈ ಸಂಗತಿಯನ್ನು ರಹಸ್ಯವಾಗಿಟ್ಟುಕೊ” ಎಂದು ಹೇಳಿ ಮಾಯವಾದನು.

ಶ್ರೀಹರಿಯು ಮಾತುಕೊಟ್ಟಿದ್ದಂತೆ ಅದಿತಿದೇವಿಯ ಮಗನಾಗಿ ಅವತರಿಸಿದನು. ಆತನ ದೇಹಕಾಂತಿಯಿಂದ ಕಶ್ಯಪರ ಮನೆಯೆಲ್ಲ ತೊಳಗಿ ಬೆಳಗಿತು; ಅದಿತಿದೇವಿಯು ತನ್ನ ಗಂಡನೊಡನೆ ಆ ಮಗುವನ್ನು ಸಂತೋಷ ಸಂಭ್ರಮಗಳಿಂದ ನೋಡುತ್ತಿರುವಂತೆಯೇ ಆ ಮಗು ಪುಟ್ಟ ಬಾಲಕನ ಆಕಾರವನ್ನು ತಳೆಯಿತು. ಆ ಮಗುವಿಗೆ ವಾಮನನೆಂದು ಹೆಸರಿಡಲಾಯಿತು. ಮುಂದೆ ಬ್ರಹ್ಮಚಾರಿಯಾದ ವಾಮನಮೂರ್ತಿಯು ಬ್ರಹ್ಮತೇಜಸ್ಸಿನಿಂದ ತೊಳಗಿ ಬೆಳಗುತ್ತಾ ಬ್ರಹ್ಮಋಷಿಗಳಿಗಿಂತ ಹೆಚ್ಚು ಕಾಂತಿಯುಕ್ತನಾಗಿದ್ದನು.

ವಾಮನಾವತಾರಿಯಾದ ಶ್ರೀಹರಿಯು ಕಶ್ಯಪಾಶ್ರಮದಲ್ಲಿ ಉದಿತೋದಿತನಾಗುತ್ತಿರಲು, ಮೂರು ಲೋಕಗಳ ಸ್ವಾಮಿಯಾಗಿದ್ದ ಬಲಿಚಕ್ರವರ್ತಿಯು ಶುಕ್ರಾಚಾರ್ಯರ ನೇತೃತ್ವದಲ್ಲಿ ಅಶ್ವಮೇಧಯಾಗವನ್ನು ಕೈಗೊಂಡನು. ಇದನ್ನು ಕೇಳಿದ ವಾಮನನು ಅದನ್ನು ನೋಡಲೆಂದು ಹೊರಟು, ನರ್ಮದಾ ನದಿಯ ತೀರದಲ್ಲಿದ್ದ ಯಾಗಶಾಲೆಯನ್ನು ಸೇರಿದನು. ಒಂದು ಕೈಯಲ್ಲಿ ಕೊಡೆ, ಮತ್ತೊದು ಕೈಯಲ್ಲಿ ಕಮಂಡಲು, ಕೊರಳಲ್ಲಿ ಜನಿವಾರ, ಸೊಂಟದಲ್ಲಿ ಮೌಂಜಿ, ಮೈಮೇಲೆ ಉತ್ತರೀಯ ಇವುಗಳನ್ನು ಧರಿಸಿ ಮೂಡಿದ ಸೂರ್ಯನಂತೆ ತೇಜಸ್ವಿಯಾದ ಆ ವಾಮನಮೂರ್ತಿಯನ್ನು ಕಾಣುತ್ತಲೇ ಅಲ್ಲಿದ್ದ ಎಲ್ಲರೂ ನಿಂತು ಆತನನ್ನು ಬರಮಾಡಿಕೊಂಡರು.

ಬಲಿಚಕ್ರವರ್ತಿಗೆ ವಾಮನನಲ್ಲಿ ಅಪಾರವಾದ ಭಕ್ತಿಗೌರವಗಳು ಮೂಡಿದವು. ಆತನು ಆ ವಟುವಿಗೆ ನಮಸ್ಕರಿಸಿ, ಆತನನ್ನು ಒಂದು ಮಣೆಯಮೇಲೆ ಕುಳ್ಳಿರಿಸಿದನು. ಆತನ ಪಾದವನ್ನು ತೊಳೆದು, ಆ ಪಾದ ತೀರ್ಥವನ್ನು ತನ್ನ ತಲೆಯಲ್ಲಿ ಧರಿಸಿದ ಮೇಲೆ “ಸ್ವಾಮಿ, ತಪಸ್ಸೇ ಆಕಾರವನ್ನು ತಾಳಿ ಬಂದಂತಿರುವ ನಿಮ್ಮನ್ನು ಕಂಡು ಧನ್ಯನಾದೆ, ನನ್ನ ವಂಶ ಪವಿತ್ರವಾಯಿತು, ನನ್ನ ಯಾಗ ಸಫಲವಾದಂತಾಯಿತು. ನಿಮ್ಮನ್ನು ನೋಡಿದರೆ ಯಾವುದೋ ಯಾಚನೆಗಾಗಿ ನನ್ನ ಬಳಿ ಬಂದಂತೆ ಕಾಣಿಸುತ್ತದೆ. ತಮ್ಮ ಬಯಕೆ ಯಾವುದಿದ್ದರೂ ಅದನ್ನು ಪೂರೈಸಲು ನಾನು ಸಿದ್ಧನಾಗಿದ್ದೇನೆ. ಅದನ್ನು ಸ್ವೀಕರಿಸಿ ನನ್ನನ್ನು ಉದ್ಧರಿಸಬೇಕು” ಎಂದು ಕೇಳಿಕೊಂಡನು.

ಬಲೀಂದ್ರನ ಮಾತುಗಳನ್ನು ಕೇಳಿ ವಾಮನ ಮೂರ್ತಿಗೆ ಬಹು ಸಂತೋಷವಾಯಿತು. ಆತನು “ಅಯ್ಯಾ ಬಲೀಂದ್ರ, ಶುಕ್ರನಂತಹ ಗುರು, ಪ್ರಹ್ಲಾದನಂತಹ ಹಿರಿಯ – ಇವರ ಸಹವಾಸದಲ್ಲಿರುವ ನೀನು ಧರ್ಮಪರನಾಗಿರುವುದು ಸಹಜವಾಗಿಯೇ ಇದೆ. ಕಲಿತನ, ದಾನಗುಣಗಳು ನಿಮ್ಮ ವಂಶದ ಹುಟ್ಟುಗುಣ. ಇದನ್ನು ತಿಳಿದೇ ನಾನು ನಿನ್ನಲ್ಲಿಗೆ ಯಾಚನೆಗಾಗಿ ಬಂದಿದ್ದೇನೆ. ನನಗೆ ಅತಿಯಾಸೆಯೇನೂ ಇಲ್ಲ. ನನ್ನ ಹೆಜ್ಜೆಯಲ್ಲಿ ಮೂರು ಹೆಜ್ಜೆಗಳಾಗುವಷ್ಟು ಭೂಮಿಯನ್ನು ನನಗೆ ದಯಪಾಲಿಸು ಅಷ್ಟು ಸಾಕು” ಎಂದನು. ಇದನ್ನು ಕೇಳಿದ ಬಲಿಯು “ಅಯ್ಯೋ ಬ್ರಾಹ್ಮಣ, ಎಂತಹ ಸಣ್ಣ ಬೇಡಿಕೆ ನಿನ್ನದು! ಮೂರು ಲೋಕಕ್ಕೂ ಒಡೆಯನಾದ ನನ್ನಲ್ಲಿ, ಹಲವು ದ್ವೀಪಗಳನ್ನೇ ಕೊಡೆಂದರೂ ಸಲ್ಲುತ್ತಿತ್ತು. ನನ್ನಲ್ಲಿ ದಾನವನ್ನು ಪಡೆದವನು ಮತ್ತೊಬ್ಬನ ಬಳಿಯಲ್ಲಿ ಕೈಯೊಡ್ಡುವುದು ಬೇಡ. ಆದ್ದರಿಂದ ನಿನಗೆ ಫಲವತ್ತಾದ ಒಂದು ದೊಡ್ಡ ಜಮೀನನ್ನು ಕೊಡುತ್ತೇನೆ ತೆಗೆದುಕೋ” ಎಂದನು. ಆದರೆ ವಾಮನನು ಅದಕ್ಕೆ ಒಪ್ಪಲಿಲ್ಲ. “ಅಯ್ಯಾ ಆಸೆಗೆ ಕೊನೆಯಲ್ಲಿ? ನನಗೆ ದುರಾಸೆಯಿಲ್ಲ. ನಾನು ಕೇಳಿದಷ್ಟು ಕೊಟ್ಟರೆ ಸಾಕು, ನಾನು ತೃಪ್ತ” ಎಂದ. ಆಗ ಬಲೀಂದ್ರನು “ಹಾಗೆಯೇ ಆಗಲಿ. ನಿನಗೆ ಬೇಕಾದಷ್ಟನ್ನು ತೆಗೆದುಕೊ” ಎಂದು ಹೇಳಿ, ದಾನಧಾರೆಯನ್ನು ಕೊಡುವುದಕ್ಕಾಗಿ ಕೈಗೆ ಪಾತ್ರೆಯನ್ನೆತ್ತಿಕೊಂಡನು. ಇದನ್ನು ಕಂಡು ಬಳಿಯಲ್ಲಿಯೇ ಇದ್ದ ಶುಕ್ರಾಚಾರ್ಯರು “ಮಹಾರಾಜ, ನೀನು ಮೋಸಹೋಗುತ್ತಿರುವೆ. ಈ ವಾಮನ ವಿಷ್ಣುವಿನ ಅವತಾರ; ದೇವತೆಗಳ ರಕ್ಷಣೆಗಾಗಿ ಅದಿತಿಯ ಮಗನಾಗಿ ಹುಟ್ಟಿಬಂದಿದ್ದಾನೆ. ಇವನಿಂದ ನಿನಗೆ ಕೇಡು ತಪ್ಪದು. ಆದ್ದರಿಂದ ನಿನ್ನ ದಾನಕಾರ್ಯವನ್ನು ನಿಲ್ಲಿಸು. 'ಕೊಟ್ಟಮಾತು ತಪ್ಪುವುದೆಂತು' ಎಂಬ ಶಂಕೆ ಕೂಡಾ ಬೇಡ. ಪ್ರಾಣರಕ್ಷಣೆಗಾಗಿ ಸುಳ್ಳುಹೇಳುವುದು ಅಧರ್ಮವಾಗದು” ಎಂದು ಬೋಧಿಸಿದನು. ಆದರೆ ಬಲಿರಾಜನಿಗೆ ಆತನ ಭೋದನೆ ಹಿಡಿಸಲಿಲ್ಲ. ‘ಸುಳ್ಳಿಗಿಂತ ದೊಡ್ಡ ಪಾಪವಿಲ್ಲ' ಎಂದು ಹೇಳಿ, ಆತನು ವಾಮನನಿಗೆ ದಾನಧಾರೆಯನ್ನು ಎರೆದನು. ಆತನ ಮಡದಿಯಾದ ವಿಂಧ್ಯಾವಳಿಯು ಬಂಗಾರದ ಕಲಶದಿಂದ ನೀರೆರೆಯಲು, ವಾಮನನ ಪಾದಗಳನ್ನು ತೊಳೆದು ಆತನಿಗೆ ಮತ್ತೊಮ್ಮೆ ನಮಸ್ಕರಿಸಿದನು.

ದಾನಧಾರೆಯು ಕೈಯಲ್ಲಿ ಬೀಳುತ್ತಲೇ ವಾಮನನು ಬೆಳೆಯುವುದಕ್ಕೆ ಪ್ರಾರಂಭಿಸಿದನು. ಆ ಬೆಳವಣಿಗೆಗೆ ಕೊನೆಯೇ ಇಲ್ಲ. ಪಾತಾಳ ಆತನ ಅಂಗಾಲಿನಲ್ಲಿ, ಭೂಮಿ ಹೆಜ್ಜೆಯಲ್ಲಿ, ವಾಯು ಮಂಡಲ ತೊಡೆಯಲ್ಲಿ, ನಾಭಿಯಲ್ಲಿ ಅಂತರಿಕ್ಷ, ಎದೆಯಲ್ಲಿ ನಕ್ಷತ್ರಮಂಡಲ – ಶಿರಸ್ಸು ಎಲ್ಲಿಯೋ – ಸಕಲ ಲೋಕಗಳನ್ನೂ ಆವರಿಸಿಕೊಂಡು ಬೆಳೆದ ಈ ಭಯಂಕರಾಕೃತಿಯನ್ನು ಕಂಡು ದೇವದಾನವರು ಭಯದಿಂದ ಭ್ರಾಂತರಾಗಿಹೋದರು. ಇಂತು ಬೃಹದಾಕರವನ್ನು ತಾಳಿ, ಒಂದು ಪಾದದಿಂದ ಬಲಿಯು ಆಳುತ್ತಿದ್ದ ಸಕಲ ಭೂಮಂಡಲವನ್ನೂ ಮತ್ತೊಂದರಿಂದ ನಭೋಮಂಡಲವನೂ ಅಳೆದು, ಮೂರನೆಯ ಹೆಜ್ಜೆಯನ್ನಿಡಲು ತಾವೆಲ್ಲಿ ಎಂದು ಬಲಿಯನ್ನು ಕೇಳಿದನು. ಆತನು ಮುಂದೋರದೆ ಸುಮ್ಮನಿರಲು, ತ್ರಿವಿಕ್ರಮನಾದ ವಾಮನನು “ಅಯ್ಯಾ, ನೀನು ಕೊಟ್ಟ ಮಾತಿಗೆ ತಪ್ಪಿದರೆ ನರಕಕ್ಕೆ ಹೋಗುವೆ. ಲೋಕೇಶ್ವರನೆಂಬ ಅಹಂಕಾರದಿಂದ ನೀನು ಮಾತು ಕೊಟ್ಟು ಈಗ ತಪ್ಪುವೆಯಾ?” ಎಂದು ಗರ್ಜಿಸಿದನು. ಹೀಗೆ ಮೋಸದಿಂದ ತನಗೆ ಮಹತ್ತಾದ ಅಪಕಾರವನ್ನು ಮಾಡಿದ್ದರೂ ಬಲಿಯು ಸ್ವಲ್ಪವೂ ಅಶಾಂತನಾಗದೆ “ಅಯ್ಯಾ, ನೀನು ನನಗೆ ಮೋಸಮಾಡಿದ್ದಿ, ಆದರೂ ನನ್ನನ್ನೇ ಸುಳ್ಳನೆಂದು ಹಂಗಿಸುತ್ತಿದ್ದಿ. ನಾನು ಎಂದಿಗೂ ಸುಳ್ಳಾಡುವುದಿಲ್ಲ. ಇಗೋ ನೋಡು. ಈ ನನ್ನ ತಲೆಯ ಮೇಲೆ ನಿನ್ನ ಮೂರನೆಯ ಹೆಜ್ಜೆಯನ್ನಿಡು. ನಾನು ರಾಜ್ಯಕೋಶಗಳು ಹೋದವೆಂದಾಗಲಿ, ನನಗೆ ಅನ್ಯಾಯವಾಯಿತೆಂದಾಗಲೀ ವ್ಯಥೆಪಡುವುದಿಲ್ಲ; ಸುಳ್ಳನೆಂದು ಕರೆದರೆ ಮಾತ್ರ ಸಂಕಟವಾಗುತ್ತದೆ. ನಾನು ಮಹಾಭಕ್ತನಾದ ಪ್ರಹ್ಲಾದನ ಮೊಮ್ಮಗ. ನಾನೂ ಆತನಂತೆ ದೈವಭಕ್ತ. ದೈವಕಾರ್ಯದಲ್ಲಿ, ಧರ್ಮಕಾರ್ಯದಲ್ಲಿ ಜೀವವನ್ನು ಬಲಿದಾನ ಮಾಡಲು ನಾನೇನೂ ಹೆದರುವವನಲ್ಲ” ಎಂದನು.

ಬಲೀಂದ್ರನು ಮಾತು ಮುಗಿಸುವ ವೇಳೆಗೆ ಸರಿಯಾಗಿ ಪ್ರಹ್ಲಾದನೇ ಅಲ್ಲಿಗೆ ಬಂದನು. ಆತನು ಮೊಮ್ಮಗನಿಗೆ ಒದಗಿದ ಸ್ಥಿತಿಯನ್ನು ಕಂಡು ಮರುಗಲಿಲ್ಲ. ಆತನು ತ್ರಿವಿಕ್ರಮರೂಪಿಯಾದ ಶ್ರೀಹರಿಯನ್ನು ಭಕ್ತಿಯಿಂದ ನಮಸ್ಕರಿಸಿ “ದೇವದೇವ, ನೀನೇ ಕೊಟ್ಟ ತ್ರಿಲೋಕಸಾಮ್ರಾಜ್ಯವನ್ನು ನೀನೇ ಕಿತ್ತುಕೊಳ್ಳುತ್ತಿರುವೆ. ಇದಕ್ಕಾಗಿ ಅಳುವುದೇಕೆ? ಸಂಪತ್ತು ಮನುಷ್ಯನ ಅಹಂಕಾರವನ್ನು ಹೆಚ್ಚಿಸಿ, ಅವನನ್ನು ಅಧೋಗತಿಗೆ ಎಳೆಯುತ್ತದೆ. ಅಂತಹ ಸಂಪತ್ತನ್ನು ನೀನಾಗಿಯೇ ನಿವಾರಿಸುತ್ತಿರುವುದು ಒಂದು ದೊಡ್ಡ ಅನುಗ್ರಹ” ಎಂದನು. ಬಲಿಯ ಪತ್ನಿಯಾದ ವಿಂಧ್ಯಾವಳಿಯೂ ಶ್ರೀಹರಿಗೆ ಅಡ್ಡಬಿದ್ದು “ಸ್ವಾಮಿ, ನಿಮ್ಮ ಪಾದವನ್ನು ತೊಳೆದು ಮೂರು ಲೋಕಗಳನ್ನೂ ನಿಮಗೆ ಅರ್ಪಿಸಿರುವೆವಲ್ಲವೆ? ಅಂತಹ ನಮಗೆ ದುಃಖ ಹೇಗೆ ತಾನೇ ಬಂದೀತು? ನಮ್ಮನ್ನು ಉದ್ಧರಿಸಿ ಕಾಪಾಡು” ಎಂದು ಪ್ರಾರ್ಥಿಸಿದಳು.

ಆಗ ಶ್ರೀಹರಿಯು ಗುಡುಗಿನಂತಹ ಗಂಭೀರ ಧ್ವನಿಯಿಂದ ಅಲ್ಲಿದ್ದವರನ್ನೆಲ್ಲಾ ಕುರಿತು “ಅಯ್ಯಾ, ನಾನು ಯಾರನ್ನು ಉದ್ಧಾರಮಾಡಬೇಕೆಂದಿರುವೇನೋ ಅವನ ಸರ್ವಸ್ವವನ್ನೂ ಮೊದಲು ಕಿತ್ತುಕೊಳ್ಳುತ್ತೇನೆ. ನನ್ನ ಅನುಗ್ರಹಕ್ಕೆ ಪಾತ್ರನಾದನೆಂದರೆ ಅವನಲ್ಲಿ ಕುಲ, ರೂಪ, ವಿದ್ಯೆ ಅಧಿಕಾರ, ಧನ ಮೊದಲಾದವುಗಳ ಮದವೆಂದೂ ಅಂಕುರಿಸದು. ಈ ಬಲೀಂದ್ರನು ನಾನು ಒಡ್ಡಿದ ಪರೀಕ್ಷೆಯಲ್ಲಿ ಗೆದ್ದು ನನ್ನ ಪರಮಭಕ್ತನಾಗಿದ್ದಾನೆ. ಯಾರೂ ಗೆಲ್ಲಲಾಗದ ಮಾಯೆಯನ್ನು ಈತ ಗೆದ್ದು ಮಹಾನುಭಾವನಾಗಿದ್ದಾನೆ. ಸತ್ಯವನ್ನು ವ್ರತವಾಗಿ ಪಡೆದಿರುವ ಈತನಿಗೆ ನಾನು ಸಾಲೋಕ್ಯಪದವಿಯನ್ನು ಕೊಟ್ಟಿದ್ದೇನೆ. ಮುಂದೆ ಸಾವರ್ಣಿ ಮನ್ವಂತರದಲ್ಲಿ ಈತನು ದೇವೆಂದ್ರನಾಗುತ್ತಾನೆ. ಅಲ್ಲಿಯವರೆಗೆ ಈತನು ಸುತಲಲೋಕದ ಪ್ರಭುವಾಗಿರುವನು” ಎಂದು ಹೇಳಿದನು. ಆನಂತರ ಆತನು ಬಲಿಯಕಡೆ ನೋಡುತ್ತಾ, “ಅಯ್ಯಾ ಬಲೀಂದ್ರ ನೀನು ಇಂದಿನಿಂದ ಸುತಲ ಲೋಕದ ಸ್ವಾಮಿ. ನಿನ್ನ ಬಂಧು ಬಾಂಧವರೊಡನೆ ಅಲ್ಲಿ ನೆಲೆಸು. ನಾನು ಅಲ್ಲಿ ನಿನಗೆ ಸದಾ ದರ್ಶನವನ್ನು ಕೊಡುತ್ತಿರುವೆನು” ಎಂದು ಹೇಳಿದನು. ಬಲಿಯು ಶ್ರೀಹರಿಗೆ ನಮಸ್ಕರಿಸಿ, ಆತನ ಅಪ್ಪಣೆಯಂತೆ ಸುತಲಲೋಕಕ್ಕೆ ಹೊರಟನು.

(
ಕಥಾನಕದ ಆಧಾರ: .ಸು ಶ್ಯಾಮರಾಯರ 'ವಚನ ಭಾಗವತ' ಮತ್ತು ಬನ್ನಂಜೆ ಗೋವಿಂದಾಚಾರ್ಯರ 'ಸಂಗ್ರಹ ಭಾಗವತ')

ಬಲಿಪಾಡ್ಯಮಿ ವಿಶೇಷತೆಗಳೇನು ?

ಮೂರು ದಿನಗಳ ದೀಪಾವಳಿಯ ಸಂಭ್ರಮದಲ್ಲಿ ಮೂರನೆಯ ದಿನ ಆಚರಿಸುವ ಹಬ್ಬ ಬಲಿ ಪಾಡ್ಯಮಿ. ಬಲಿ ಪಾಡ್ಯಮಿಯೊಂದಿಗೆ ಮೂರು ದಿನಗಳ ಹಬ್ಬ ಮುಕ್ತಾಯವಾಗುತ್ತದೆ.

ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗಿದೆ.

ಬಲೀಂದ್ರನನ್ನು ಬಲಿ ಚಕ್ರವರ್ತಿ ಎಂದು ಕೂಡಾ ಕರೆಯಲಾಗುತ್ತದೆ. ಹಿರಣ್ಯ ಕಶ್ಯಪನ ವಂಶಸ್ಥನಾದ ಈತ ದಾನವನಾದರೂ, ಬಲಿಪಾಡ್ಯಮಿಯ ದಿನ ಜನರೆಲ್ಲರೂ ಬಲೀಂದ್ರನನ್ನು ಭಕ್ತಿ, ಶ್ರದ್ಧೆಗಳಿಂದ ಆರಾಧಿಸುತ್ತಾರೆ.

ಈತ ಹಿರಣ್ಯ ಕಶ್ಯಪುವಿನ ಮಗ ಮಹಾ ವಿಷ್ಣು ಭಕ್ತನಾದ ಪ್ರಹ್ಲಾದನ ಮೊಮ್ಮಗ ಹಾಗೂ ತನ್ನ ತಾತನಂತೆ ಈತನು ಕೂಡಾ ವಿಷ್ಣು ಭಕ್ತನೇ.

ಬಲಿ ಚಕ್ರವರ್ತಿ ಹುಟ್ಟಿನಿಂದ ರಾಕ್ಷಸನಾದರೂ, ವರ್ತನೆಯಿಂದ ಬಹಳ ಸಾತ್ವಿಕ ಹಾಗೂ ದೈವಭಕ್ತನಾಗಿದ್ದ. ಇನ್ನು ಈತನ ವಿಶೇಷ ಗುಣವೆಂದರೆ ಯಾರಾದರೂ ದಾನ ಕೇಳಿದರೆ ಅವರನ್ನು ಬರಿಗೈಲಿ ಹಿಂದಿರುಗಿಸುತ್ತಿರಲಿಲ್ಲ‌.

ದಾನವ ಗುರುಗಳಾದ ಶುಕ್ರಾಚಾರ್ಯರು ಹಲವು ಸಲ ಈ ಗುಣ ಒಳ್ಳೆಯದಲ್ಲ ಎಂದು ಬಲಿ ಚಕ್ರವರ್ತಿಗೆ ಸಲಹೆ ನೀಡಿದ್ದರೂ, ಬಲಿ ಮಾತ್ರ ದಾನ ಮಾಡುವ ತನ್ನ ಗುಣವನ್ನು ಬಿಟ್ಟಿರಲಿಲ್ಲ.

ದೇವಲೋಕವನ್ನು ಗೆದ್ದಿದ ಬಲಿ ಚಕ್ರವರ್ತಿ ಇಂದ ತಮಗೆ ರಕ್ಷಣೆ ನೀಡಬೇಕೆಂದು ದೇವತೆಗಳು ಬೇಡಿಕೊಂಡಾಗ ಮಹಾವಿಷ್ಣುವು ವಾಮನ ರೂಪವನ್ನು ತಾಳಿ ಬಲಿ ಚಕ್ರವರ್ತಿಯ ಬಳಿ ಹೋದನು.

ಬಲಿ ಚಕ್ರವರ್ತಿ ಅಶ್ವಮೇಧ ಯಾಗವನ್ನು ಮಾಡುತ್ತಾ, ಬಂದವರಿಗೆ ದಾನ ನೀಡುತ್ತಿದ್ದನು. ಆಗ ವಾಮನ ರೂಪದಲ್ಲಿ ಅಲ್ಲಿಗೆ ಬಂದ ಮಹಾವಿಷ್ಣುವನ್ನು ಬಲೀಂದ್ರನು ಏನು ಬೇಕೆನ್ನೆಲು ವಾಮನನು ನನಗೆ ಮೂರು ಹೆಜ್ಜೆಗಳ ಜಾಗ ಬೇಕೆಂದನು.

ಆಗ ಬಂದಿರುವುದು ಮಹಾವಿಷ್ಣು ಎಂದು ತಿಳಿದ ಶುಕ್ರಾಚಾರ್ಯರು, ದಾನವನ್ನು ಜಲಸಾಕ್ಷಿಯಾಗಿ ನೀಡುವುದರಿಂದ ಬಲೀಂದ್ರನ ಕಮಂಡಲದೊಳಗೆ ಕಪ್ಪೆಯ ರೂಪದಲ್ಲಿ ಸೇರಿ ನೀರು ಕಮಂಡಲದಿಂದ ಹೊರಗೆ ಬರದಂತೆ ಅಡ್ಡವಾದರು.

ಆಗ ವಾಮನ ದರ್ಭೆಯಿಂದ ಕಮಂಡಲದಿಂದ ನೀರು ಬರುವ ಕಡೆ ತಿವಿದಾಗ, ಶುಕ್ರಾಚಾರ್ಯರ ಕಣ್ಣಿಗೆ ಅದು ಚುಚ್ಚಿ ಅವರು ಒಂದು ಕಣ್ಣನ್ನು ಕಳೆದುಕೊಂಡರು.

ಬಲಿ ಚಕ್ರವರ್ತಿಯು ವಾಮನನಿಗೆ ಮೂರು ಹೆಜ್ಜೆಗಳ ವರವನ್ನು ನೀಡಿದ. ಆಗ ವಾಮನನು ಆಕಾಶದೆತ್ತರಕ್ಕೆ ಬೆಳೆದು ಒಂದು ಹೆಜ್ಜೆಯನ್ನು ಆಕಾಶದ ಕಡೆಗೆ, ಇನ್ನೊಂದು ಹೆಜ್ಜೆಯನ್ನು ಭೂಮಿಯ ಮೇಲಿಟ್ಟು, ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿಯು ತನ್ನ ಶಿರದ ಮೇಲೆ ಇಡುವಂತೆ ವಾಮನನಿಗೆ ಹೇಳುತ್ತಾನೆ.

ಆಗ ಅವನ ಶಿರದ ಮೇಲೆ ಕಾಲಿಟ್ಟ ವಾಮನ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ. ಅದಾದ ನಂತರ ವಿಷ್ಣುಭಕ್ತನಾದ ಅವನಿಗೆ ಮಹಾವಿಷ್ಣು ಆಶ್ವಯುಜ ಮಾಸದಲ್ಲಿ ಭೂಮಿಗೆ ಬಂದು ಪೂಜೆ ಸ್ವೀಕರಿಸುವ ವರವನ್ನು ನೀಡಿದ.

ಆದ್ದರಿಂದಲೇ ಮೂರು ದಿನಗಳ ದೀಪಾವಳಿ ಆಚರಣೆಯಲ್ಲಿ ಮೂರನೆಯ ದಿನ ಬಲಿ ಚಕ್ರವರ್ತಿಯ ಪೂಜೆ ನಡೆಸಲಾಗುತ್ತದೆ.

ಇನ್ನು ಬಲಿಪಾಡ್ಯಮಿಯಂದು ಕೇವಲ ಬಲಿ ಚಕ್ರವರ್ತಿಯ ಪೂಜೆ ಮಾತ್ರವಲ್ಲದೆ ಗೋಪೂಜೆಯನ್ನು ಮಾಡುವ ಸಂಪ್ರದಾಯವೂ ಇದೆ.

ಮಹಾಭಾರತದಲ್ಲಿ ಶ್ರೀ ಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿ, ಬೃಂದಾವನದ ಗೋವುಗಳು ಹಾಗೂ ಗೋಪಾಲಕರಿಗೆ ಇಂದ್ರನು ಸೃಷ್ಟಿಸಿದ್ದ ಭೀಕರ ಅತಿವೃಷ್ಟಿಯಿಂದ ರಕ್ಷಣೆ ನೀಡಿದ್ದು ಕೂಡಾ ಪಾಡ್ಯದ ದಿನ ಎಂಬ ಪ್ರತೀತಿ ಇದೆ.

ಆದ್ದರಿಂದಲೇ ಅಂದು ಗೋವುಗಳನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿಕೊಂಡು ಬರುವ ಗೋಪೂಜೆಯು ಕೂಡಾ ಬಲಿಪಾಡ್ಯಮಿಯ ದಿನದಂದು ನಡೆಯುವ ಮತ್ತೊಂದು ಪ್ರಮುಖ ಧಾರ್ಮಿಕ ಆಚರಣೆಯಾಗಿದೆ.

---------- Hari Om ----------

No comments:

Post a Comment