Thursday, September 21, 2023

Rishi Panchami

 

Rishi Panchami & Rishi Panchami Vritada Vidhi and Rishi 

Panchami Kathe 

 


 


ಇವತ್ತು - 20th September 2023 --- ಋಷಿಪಂಚಮಿ.ತನ್ನಿಮಿತ್ತ ಋಷಿಪಂಚಮಿ 

ವ್ರತವಿಧಿ ಮತ್ತು ಕಥೆ.

ಸರ್ವ ಪಾಪ ನಾಶಕರವಾದ ಮಹತ್ವದ ವ್ರತವಿದು.
ಇತರ ವ್ರತಗಳಂತೆ ಆಚರಿಸುವವರು ಇತ್ತೀಚಿನ ದಿನಗಳಲ್ಲಿ ವಿರಳ.
ಆಸಕ್ತರಿಗಾಗಿ ಈ ಬರೆಹ.

ಋಷಿಪಂಚಮೀ ವ್ರತವಿಧಿ ಮತ್ತು ಕಥೆ.

ಭಾದ್ರಪದ ಶುದ್ಧ ಪಂಚಮಿಯಂದು ಋಷಿ ಪಂಚಮೀ ವ್ರತ ಆಚರಿಸುವ ಸಂಪ್ರದಾಯವಿದೆ.
ಈ ವ್ರತ ವಿಧಿ,ಮತ್ತು ಕಥೆಯನ್ನು ಶ್ರೀಕೃಷ್ಣನು ಧರ್ಮರಾಯನಿಗೆ ಹೇಳಿದ್ದನ್ನು ಬ್ರಹ್ಮನು ಶ್ವೇತಾಶ್ವನೆಂಬ ರಾಜನಿಗೆ ಉಪದೇಶಿಸಿದ್ದನು.



ವ್ರತವಿಧಿ.

ಋಷಿಪಂಚಮಿ ವ್ರತವನ್ನು ಬ್ರಾಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರ,
ನಾಲ್ಕುವರ್ಣದವರೂ,ಸ್ತ್ರೀ ಪುರುಷರೆಂಬ ಭೇದವಿಲ್ಲದೆ ಯಾರು ಬೇಕಾದರೂ ಮಾಡಬಹುದು.
ಸ್ವರ್ಣಗೌರೀ ವ್ರತದಂತೆ
ಹೆಚ್ಚಾಗಿ ಸ್ತ್ರೀಯರಿಗಾಗಿಯೇ ಈ ವ್ರತ ಇರುವುದು.

ಏಳುವರ್ಷಗಳ ವರೆಗೆ ಮಾಡಿ,


ಆದಿ,ಮಧ್ಯ ಅಥವಾ ಅಂತ್ಯದಲ್ಲಿ ಉದ್ಯಾಪನೆ ಮಾಡಬೇಕು.
ವ್ರತದ ಹಿಂದಿನ ದಿನದಿಂದ ವ್ರತದ ಮಾರನೆಯ ದಿನದ ವರೆಗೆ,ವ್ರತ ಮಾಡುವವರು ಕಾಡಿನಲ್ಲಿಬೆಳೆದ ಕಂದ ಮೂಲ,ಫಲಗಳನ್ನು ತೃಣಧಾನ್ಯಗಳನ್ನು ಮಾತ್ರ ತಿನ್ನಬೇಕು.
ಕೃಷಿ ಮಾಡಿ ಬೆಳೆದ ಯಾವ ಪದಾರ್ಥವನ್ನೂ ತಿನ್ನದೆ ಋಷಿಚರ್ಯೆಯಿಂದ ಇರಬೇಕು.
ವ್ರತದ ದಿನ ವನಸ್ಪತಿಯನ್ನು ಪ್ರಾರ್ಥಿಸಿ,ಉತ್ತರಣಿ ಕಡ್ಡಿಯಿಂದ ಹಲ್ಲುಜ್ಜಿ,ಮೈಗೆ ಮೃತ್ತಿಕೆಯನ್ನು ಲೇಪಿಸಿಕೊಂಡು ಗಂಗಾದಿತೀರ್ಥಗಳಲ್ಲಿ ಅಥವಾ ಬಹಿಸ್ತೀರ್ಥಗಳಲ್ಲಿ,ಸ್ನಾನಮಾಡಿ,
ಮಡಿಬಟ್ಟೆಗಳನ್ನುಟ್ಟು,ನಿತ್ಯಕರ್ಮಗಳನ್ನು ಮುಗಿಸಿ,ವ್ರತಕ್ಕಾಗಿ ಗೋಮಯದಿಂದ ನೆಲವನ್ನು ಸಾರಿಸಿ ಭೂ ಶುದ್ಧಿ ಮಾಡಿ,ಬಣ್ಣ ಬಣ್ಣದ ರಂಗವಲ್ಲಿಯಲ್ಲಿ ಅಷ್ಟದಳ ಪದ್ಮ ಮಂಡಲ ರಚಿಸಿ,
ಅದರ ಮೇಲೆ ಪೀಠವನ್ನಿಟ್ಟು, ಗೋಧಿ,ಅಕ್ಕಿ ಎಳ್ಳು,ಗಳನ್ನು ಪ್ರತ್ಯೇಕವಾಗಿ ಹರಡಿ,
ಹೂಗಳಿಂದ ಅಲಂಕರಿಸಿ, ಉದಕ,ಪಂಚಾಮೃತ, ಅರಿಶಿನ,ಕುಂಕುಮ,ಅಕ್ಷತೆ,
ನಾಣ್ಯವನ್ನು,ಏಳು ನದಿಗಳ ಕಲ್ಲನ್ನು ಕಲಶದೊಳಗೆ ಹಾಕಿ, ಮಾವಿನ ಕುಡಿಯ ಮೇಲೆ ತೆಂಗಿನಕಾಯಿ,ನಾಲ್ಕು ದರ್ಭೆಯ ಪವಿತ್ರ ಕೂರ್ಚವನ್ನಿಟ್ಟು, ವ್ರತ ನಿರ್ವಿಘ್ನತೆಗಾಗಿ ಮಹಾಗಣಪತಿಯ ಪೂಜೆ, ಪ್ರಾರ್ಥನೆಯ ನಂತರ, ಕಲಶಕ್ಕೆ,ಸಪ್ತರ್ಷಿಗಳಾದ, ಕಶ್ಯಪ,ಅತ್ರಿ,ಭರದ್ವಾಜ, ವಿಶ್ವಾಮಿತ್ರ,ಗೌತಮ,
ಜಮದಗ್ನಿ,ವಸಿಷ್ಠರನ್ನು, ಸಪತ್ನೀಕರಾಗಿ,ಪ್ರತ್ಯೇಕವಾಗಿ ಆವಾಹಿಸಿ, ಧ್ಯಾನಾವಾಹನಾದಿ ಷೋಡಶೋಪಚಾರ, ನಾಮಪೂಜೆ,ಧೂಪ ದೀಪ ನೈವೇದ್ಯ, ತಾಂಬೂಲಾದಿಗಳಿಂದ ಆರಾಧಿಸಿ,
ಅರ್ಘ್ಯಪ್ರದಾನ ಮಾಡಿ, ನಾನಾ ಮಂತ್ರಗಳಿಂದ ಸಪ್ತರ್ಷಿಗಳನ್ನು ಪ್ರಾರ್ಥಿಸಬೇಕು.
ಕೊನೆಯಲ್ಲಿ ಆಚಾರ್ಯನನ್ನು ಪೂಜಿಸಿ,ಶಕ್ತ್ಯನುಸಾರ ವಸ್ತ್ರ,ಧನವನ್ನು ಕೊಟ್ಟು,
ಬಂದ ಎಲ್ಲರಿಗೂ ಭೋಜನವನ್ನು ಮಾಡಿಸಬೇಕು.


ಹೀಗೆ ಸತತ ಏಳುವರ್ಷ ಮಾಡಿ,
ಎಂಟನೆಯ ವರ್ಷ ಉದ್ಯಾಪನೆ ಮಾಡಬೇಕು.
ಈ ವ್ರತ ಮಾಡುವುದರಿಂದ ಸ್ತ್ರೀಯರ ಸರ್ವ ಪಾಪಗಳೂ ನಾಶವಾಗಿ, ಮೋಕ್ಷವನ್ನು ಹೊಂದುತ್ತಾರೆ.

 

ವ್ರತದ ಕಥೆ.

ಪೂರ್ವದಲ್ಲಿ ಶ್ವೇತಾಶ್ವನೆಂಬ ರಾಜನು,ಬ್ರಹ್ಮನನ್ನು ಸಕಲ ಪಾಪ ಪರಿಹಾರಕವಾದ ಉತ್ತಮವಾದ ವ್ರತವೊಂದನ್ನು ಹೇಳೆಂದಾಗ ಬ್ರಹ್ಮನು,
"ಭಾದ್ರಪದ ಶುದ್ಧ ಪಂಚಮಿಯಂದು ಋಷಿಪಂಚಮಿ ವ್ರತವನ್ನಾಚರಿಸಿದರೆ,
ಪಾಪ,ಕಷ್ಟಗಳೆಲ್ಲ ಪರಿಹಾರವಾಗಿ ಸುಖದಿಂದಿರುವರಲ್ಲದೆ,
ಅವರಿಗೆ ಎಂದೂ ನರಕ ಪ್ರಾಪ್ತವಾಗುವುದಿಲ್ಲ ಎಂದು ವ್ರತ ವಿಧಿಯನ್ನು ತಿಳಿಸಿ,
ನಿದರ್ಶನವಾಗಿ ವಿದರ್ಭದೇಶದ ಉದಂಕ ಮುನಿಯ ಇತಿಹಾಸವನ್ನು" ಹೇಳಿದನು.

ವಿದರ್ಭದೇಶದಲ್ಲಿ ಬಹಳ ಹಿಂದೆ ವೇದವೇದಾಂಗ ಪಾರಂಗತನಾದ ಉದಂಕ ಎಂಬ ಮುನಿ ಇದ್ದನು.
ಪತಿವ್ರತಾ ಶಿರೋಮಣಿಯಾದ ಸುಶೀಲೆ ಅವನ ಪತ್ನಿ.ಒಬ್ಬ ಮಗ,ಒಬ್ಬಳು ಪುತ್ರಿ.
ಮಗನಿಗೆ ಎಂಟನೆಯ ವರ್ಷದಲ್ಲಿ ಉಪನಯನ ಮಾಡಿ ಗುರುಕುಲವಾಸಕ್ಕಾಗಿ ಕಳಿಸಿದನು.
ಗುರುಗಳಿಗೆ ಸೇವೆಮಾಡುತ್ತ ವಿಧೇಯನಾಗಿದ್ದು, ಸಕಲವೇದ,ವೇದಾಂಗ, ಷಟ್‌ಶಾಸ್ತ್ರ,ನೀತಿಶಾಸ್ತ್ರ ಪಾರಂಗತನಾಗಿ,ಗುರುಕುಲವಾಸ ಮುಗಿಸಿ ತಂದೆಯ ಮನೆಗೆ ಬಂದನು.


ಅಷ್ಟರಲ್ಲಿ ತಂದೆಯು ಅವನ ತಂಗಿಯನ್ನು ಅವನಂತೆಯೇ ವೇದಪಾರಂಗತನಾದ ವರನಿಗೆಕೊಟ್ಟು ವಿವಾಹ ಮಾಡಿದ್ದನು.ಮಗನಿಗೂ ಸತ್ಕುಲಪ್ರಸೂತಳೂ,ಅನುರೂಪಳೂ ಆದ ಕನ್ಯೆಯೊಡನೆ ಮದುವೆ ಮಾಡಿದನು.


ಕೆಲವು ವರ್ಷಗಳನಂತರ ಕಾಲಗತಿಯಿಂದ ಮಗಳಿಗೆ ವೈಧವ್ಯ ಪ್ರಾಪ್ತಿಯಾಗಿ,
ಮಗಳು ಪತಿವಿಯೋಗದ ದುಃಖದಲ್ಲಿರುವುದನ್ನು ನೋಡಿ,ತಾಯಿ ತಂದೆಯರು ದುಃಖಾಕ್ರಾಂತರಾಗಿ,
ಮಗ-ಸೊಸೆಯನ್ನು ಮನೆಯಲ್ಲಿಯೇ ಇರಲು ಹೇಳಿ,ಮಗಳೊಂದಿಗೆ ಮೂವರೂ ಯಾತ್ರೆ ಹೊರಟು,
ಗಂಗಾನದಿಯ ದಡದಲ್ಲಿ ವಾಸಿಸುತ್ತ, ಉದಂಕನು ಅನೇಕ ಶಿಷ್ಯರಿಗೆ ವೇದಪಾಠ ಹೇಳಿ ಕಾಲಕಳೆಯುತ್ತಿದ್ದರೂ ಮಗಳ ವೈಧವ್ಯದ ದುಃಖ ದೂರವಾಗಲಿಲ್ಲ. ಹೀಗಿರುವಾಗ ಒಂದು ರಾತ್ರಿ,
ಅಕಸ್ಮಾತ್ತಾಗಿ ಎಚ್ಚರಗೊಂಡ ಶಿಷ್ಯರು ಗುರುಪುತ್ರಿಯನ್ನು ನೋಡಿದಾಗ, ಅವಳ ದೇಹ ಕ್ರಿಮಿರಾಶಿಯಾಗಿದ್ದಿತು!. ಅವರು ಹೋಗಿ ಗುರುಪತ್ನಿಗೆ ತಿಳಿಸಿದರು.


ಆಕೆಯು ಬಂದು,ತನ್ನ ಮಗಳು ಕ್ರಿಮಿರಾಶಿಯಾಗಿರುವುದನ್ನು ನೋಡಿ ರೋದಿಸುತ್ತ ಉದಂಕನಿಗೆ ತೋರಿಸಿ, ನಮ್ಮ ಮಗಳ ಈ ದುರವಸ್ಥೆಗೆ ಕಾರಣವೇನೆಂದು ಕೇಳಿದಳು.



ಉದಂಕನು ಧ್ಯಾನ ಮಾಡಿ,


"ಸುಶೀಲೆ ! ನಮ್ಮ ಮಗಳು ಹಿಂದಿನ ಜನ್ಮದಲ್ಲಿ ಬ್ರಾಹ್ಮಣ ಕುಲದಲ್ಲಿ ಜನಿಸಿದ್ದರೂ,ರಜಸ್ವಲೆಯಾದಾಗ ಮನೆಯ ಹೊರಗಿರದೆ,ಮನೆಯ ಒಳಗಿದ್ದು ಓಡಾಡುತ್ತ,ಪಾತ್ರೆ,ಪಡಗ, ವಸ್ತ್ರಾದಿಗಳನ್ನು ಮುಟ್ಟುತ್ತಲೇ ಕಾಲ ಕಳೆದಿದ್ದಳು.ಅದರ ಫಲವಾಗಿ ಇವಳ ಶರೀರವು ರಾತ್ರಿಯಲ್ಲಿ ಕ್ರಿಮಿರಾಶಿಯಾಗಿರುತ್ತದೆ.
ಅವಳು ಉತ್ತಮವಾದ ವ್ರತದ ದರ್ಶನ ಮಾಡಿದ್ದರ ಪುಣ್ಯ ಫಲದಿಂದ ಈ ಜನ್ಮದಲ್ಲಿಯೂ ವಿಪ್ರ ಕುಲದಲ್ಲಿ ಜನಿಸಿದ್ದಾಳೆ. ಸ್ತ್ರೀಯು ರಜಸ್ವಲೆಯಾದಾಗ ಮೊದಲ ದಿನ ಚಂಡಾಲಿನಿ,
ಎರಡನೆ ದಿನ ಬ್ರಹ್ಮಘಾತಕಿ, ಮೂರನೆಯದಿನ ಅಗಸಗಿತ್ತಿಯಾಗಿದ್ದು,
ನಾಲ್ಕನೆಯ ದಿನ ಸಚೇಲ ಸ್ನಾನದ ನಂತರ ಪರಿಶುದ್ಧಳಾಗುತ್ತಾಳೆ" ಎಂದು ತಿಳಿಸಿದನು.



ಸುಶೀಲೆಯು,"ಅವಳು ನೋಡಿದ ಆ ಉತ್ತಮ ವ್ರತ ಯಾವುದು? ತಿಳಿಸಿ" ಎಂದು ಕೇಳಿದಾಗ ಉದಂಕನು,
ಅದು ಋಷಿಪಂಚಮೀ ವ್ರತ.ಎಲ್ಲ ವ್ರತಗಳಿಗಿಂತ ಮೇಲಾದುದು.ಈ ವ್ರತ ಮಾಡಿದರೆ ಸಕಲ ಪಾಪಗಳೂ ನಾಶವಾಗಿ, ರಜಸ್ವಲೆಯಾಗಿದ್ದೂ ಸ್ಪರ್ಶದಿಂದಾದ ದೋಷವು ನಿವಾರಣೆಯಾಗುತ್ತದೆ.
ಹಿಂದೆ ಯುಧಿಷ್ಠಿರನು, ನೀನೀಗ ನನ್ನನ್ನು ಕೇಳಿದಂತೆಯೇ ಶ್ರೀಕೃಷ್ಣನನ್ನು ಕೇಳಿದಾಗ ಋಷಿಪಂಚಮಿ


ವ್ರತದ ವಿಧಿಯನ್ನು ತಿಳಿಸಿ, ರಜಸ್ವಲೆಯಾದವಳು ಮನೆಯೊಳಗೆ ಬರದೆ ಹೊರಗಿರಬೇಕು.

ಕಾರಣವೇನೆಂದರೆ,ಹಿಂದೆ ವೃತ್ರಾಸುರನನ್ನು ಕೊಂದಿದ್ದರಿಂದ ದೇವೇಂದ್ರನಿಗೆ ಬ್ರಹ್ಮಹತ್ಯಾ ದೋಷ ಬಂದಿತು.


ಅದರ ನಿವಾರಣೆಗಾಗಿ ಬ್ರಹ್ಮನು ಬ್ರಹ್ಮಹತ್ಯಾ ದೋಷವನ್ನು ನಾಲ್ಕು ಪಾಲು ಮಾಡಿ,
ಅಗ್ನಿಯ ಮೊದಲ ಜ್ವಾಲೆಯಲ್ಲಿ ಒಂದು ಪಾಲನ್ನೂ, ನೊರೆಗಳಿಂದ ಕೂಡಿ ಹರಿಯುವ ನದಿಗಳ ಮೊದಲ ಪ್ರವಾಹದ ನೀರಿನಲ್ಲಿ ಎರಡನೆಯದನ್ನು, ಪರ್ವತ,ಮರಗಳಲ್ಲಿ ಮೂರನೆಯ ಪಾಲನ್ನು,
ನಾಲ್ಕನೆಯ ಪಾಲನ್ನು ಸ್ತ್ರೀಯ ರಜಸ್ಸಿನಲ್ಲಿ ಇಟ್ಟಿದ್ದರಿಂದ ಇಂದ್ರನ ಬ್ರಹ್ಮಹತ್ಯಾ ದೋಷ ನಿವಾರಣೆಯಾಯಿತು. ಜ್ಞಾನ ಅಥವಾ ಅಜ್ಞಾನದಿಂದ ರಜಸ್ವಲೆಯಾಗಿದ್ದಾಗ,
ನಿಯಮ ಪಾಲಿಸದೆ ಸಂಸರ್ಗ ದೋಷಕ್ಕೆ ಯಾರು ಗುರಿಯಾಗಿರುವರೋ,
ಅಂತಹವರು ಆ ದೋಷ ಪರಿಹಾರಕ್ಕಾಗಿ ಋಷಿಪಂಚಮೀ ವ್ರತವನ್ನು ಆಚರಿಸಬೇಕು" ಎಂದು ಹೇಳಿದ ಶ್ರೀಕೃಷ್ಣನು ಧರ್ಮರಾಯನಿಗೆ ಇದೇ ವಿಚಾರದ ಪೂರ್ವ ವೃತ್ತಾಂತವನ್ನು ವಿವರಿಸಿದನು.

ಕೃತಯುಗದಲ್ಲಿ ವಿದರ್ಭದೇಶದಲ್ಲಿ ರಾಜರ್ಷಿಯಾದ,ಚಾತುರ್ವರ್ಣದವರನ್ನೂ ಅವರವರ ಧರ್ಮಗಳಿಗೆ ಚ್ಯುತಿ ಬಾರದಂತೆ ಧರ್ಮಮಾರ್ಗದಿಂದ ರಾಜ್ಯಭಾರ ಮಾಡುತ್ತ,
ಧರ್ಮಾತ್ಮನೆಂದು ಖ್ಯಾತಿ ಪಡೆದಿದ್ದ ಸೇನಜಿತ್ ಎಂಬ ರಾಜನಿದ್ದನು. ಅಲ್ಲಿಯೇ ಚತುರ್ವೇದ ಪಾರಂಗತನಾದ ಸುಮಿತ್ರನೆಂಬ ಬ್ರಾಹ್ಮಣನು, ಪತಿವ್ರತೆಯಾದ ಪತ್ನಿ ಜಯಶ್ರೀಯೊಂದಿಗೆ,
ವ್ಯವಸಾಯ ಮಾಡಿ,ಸಕಲ ಜೀವಿಗಳ ಬಗ್ಗೆ ದಯೆ ಉಳ್ಳವರಾಗಿದ್ದರು.
ಜಯಶ್ರೀಯು ರಜಸ್ವಲೆಯಾಗಿದ್ದಾಗಲೂ ಅಪನಂಬಿಕೆಯಿಂದ ಬೇರೆಯವರಿಗೆ ಅಡಿಗೆ ಮೊದಲಾದ ಕೆಲಸಗಳನ್ನು ಮಾಡಲು ಬಿಡದೆ ತಾನೇ ಮಾಡುತ್ತಿದ್ದಳು.


ಹೀಗೆಯೇ ಕಾಲಕಳೆದು ಕಾಲ ನಿಯಮದಂತೆ ಅವಳು ಮರಣ ಹೊಂದಿದಳು. ಕೆಲವು ದಿನಗಳ ಬಳಿಕ ಸುಮಿತ್ರನೂ ವಿಧಿವಶನಾದನು. ಜಯಶ್ರೀಯು ತನ್ನ ರಜಸ್ವಲೆಯಾದಾಗಿನ ಪಾಪಕೃತ್ಯದ ಫಲದಿಂದ ಹೆಣ್ಣು ನಾಯಿಯಾಗಿ, ಸುಮಿತ್ರನು ರಜಸ್ವಲಾ ಸಂಸರ್ಗದಿಂದ ಎತ್ತಾಗಿ ಜನಿಸಿದರು.


ಪೂರ್ವಜನ್ಮದ ಸಂಸ್ಕಾರದಿಂದ ಹಿಂದಿನ ಜನ್ಮದ ಸ್ಮರಣೆ ಇದ್ದುದರಿಂದ,ತಮ್ಮ ಮಗ ಸುಮತಿಯ ಮನೆಯನ್ನೇ ಸೇರಿ ವಾಸಮಾಡುತ್ತಿದ್ದರು. ಹೀಗಿರುವಾಗ ಸುಮಿತ್ರನ ಶ್ರಾದ್ಧದ ದಿನ ಬಂದಿತು.
ಸುಮತಿಯು,ಪತ್ನಿಯಾದ ಚಂದ್ರಮತಿಗೆ ಶ್ರಾದ್ಧ ಭೋಜನಕ್ಕಾಗಿ ಭಕ್ತಿಯಿಂದ ಪಿತೃಗಳನ್ನು ಸ್ಮರಿಸಿ,
ಭಕ್ಷ್ಯಭೋಜ್ಯಾದಿಗಳನ್ನು ಮಾಡಲು ತಿಳಿಸಿದನು. ಅವಳು ಹಾಗೆಯೇ ಮಾಡಿ,ಏನೋ ವಸ್ತು ತರಲು ಸಾಮಗ್ರಿಗಳ ಕೋಣೆಗೆ ಹೋಗಿದ್ದಾಗ, ಮನೆಯ ಮಾಡಿನೊಳಗೆ ಬಂದಿದ್ದ ಸರ್ಪದ ವಿಷವು ಪಾಯಸದ ಪಾತ್ರೆಯೊಳಗೆ ಬಿದ್ದಿತು.ಇದವಳಿಗೆ ತಿಳಿಯದು.ಇದನ್ನು ಗಮನಿಸಿದ ಹೆಣ್ಣು ನಾಯಿಯು,ವಿಷಮಿಶ್ರಿತ ಪಾಯಸವನ್ನು ತಿಂದರೆ, ಶ್ರಾದ್ಧ ಭೋಜನಕ್ಕೆ ಬಂದವರು ಮೃತರಾಗುತ್ತಾರೆಂದು,
ಮನೆಯೊಳಗೆ ಬಂದು ಪಾಯಸದ ಪಾತ್ರೆಗೆ ಬಾಯಿ ಹಾಕಿತು.ಅದೇ ಸಮಯಕ್ಕೆ ಒಳಬಂದ ಚಂದ್ರಮತಿಯು ಇದನ್ನು ನೋಡಿ, ಮೈಲಿಗೆಯಾಯಿತೆಂದು ಸಿಡುಕಿ, ಪಾಯಸದ ಪಾತ್ರೆಯನ್ನು ಬೇರೆ ಕಡೆಗಿಟ್ಟು, ಕೊಳ್ಳಿಯನ್ನೆತ್ತಿ ನಾಯಿಗೆ ಹೊಡೆದು,ಸ್ನಾನ ಮಾಡಿ ಬಂದು,ಬೇರೆ ಪಾಯಸವನ್ನುಮಾಡಿದಳು.


ಶ್ರಾದ್ಧಕಾರ್ಯ ಸಂಪನ್ನಗೊಂಡು, ಭೋಜನಾನಂತರ ಅತಿಥಿಗಳು ಮನೆಗೆ ತೆರಳಿದರು.
ಬ್ರಾಹ್ಮಣರ ಊಟವಾದ ಮೇಲೆ,ಎಂಜಲೆಲೆಯನ್ನೂ ಹೊರಗೆ ಹಾಕಲಿಲ್ಲ.
ಇದರಿಂದ ನಾಯಿಗೆ ಆಹಾರವಿಲ್ಲದಂತಾಗಿ, ಅಂದು ರಾತ್ರಿ ಪಕ್ಕದ ಕೊಟ್ಟಿಗೆಯಲ್ಲಿ ಎತ್ತಾಗಿದ್ದ ಪತಿಗೆ ತಾನು ಮಾಡಿದ್ದನ್ನು ಹೇಳಿಕೊಂಡಿತು. "ಬೆಳಗಿನಿಂದ ಹೊಲದ ಉಳುಮೆಮಾಡಿ,ಆಯಾಸ,ಹಸಿವು ಜೊತೆಗೆ ಮೈಯೆಲ್ಲ ನೋಯುತ್ತಿದೆ. ನನಗೆ ಹುಲ್ಲು,ನೀರನ್ನೂ ಸಹ ನೀಡಿಲ್ಲ.
ಸತಿಯೇ! ಪೂರ್ವ ಜನ್ಮದಲ್ಲಿ ನಾವು ಮಾಡಿದ ಪಾಪ ಕರ್ಮದ ಫಲವಾಗಿ,
ನಮಗೆ ಈ ಪಶುಜನ್ಮ ಪ್ರಾಪ್ತವಾಗಿದೆ" ಎಂದು ಎತ್ತು ಹೇಳಿತು.ಮನುಷ್ಯರ ಮಾತು ಕೇಳಿದಂತಾಗಿ ಎಚ್ಚರವಿದ್ದ ಸುಮಿತ್ರನು ಅವುಗಳ ಮಾತನ್ನಾಲಿಸಿ,ಇವರು ನನ್ನ ತಾಯಿತಂದೆಯರೆಂದು ತಿಳಿದು ದುಃಖಾಕ್ರಾಂತನಾಗಿ, ಬೆಳಗಾಗುತ್ತಲೇ,ನಿತ್ಯವಿಧಿಯನ್ನು ಮುಗಿಸಿ,ಅರಣ್ಯದ ತಪೋಭೂಮಿಯಲ್ಲಿದ್ದ ಋಷಿಗಳಿದ್ದಲ್ಲಿಗೆ ಹೋಗಿ ನಮಸ್ಕರಿಸಿ,ವಿಷಯ ನಿವೇದಿಸಿ,
ಇದಕ್ಕೆ ಪರಿಹಾರೋಪಾಯ ಹೇಳಿ, ನನ್ನ ಮಾತಾಪಿತೃಗಳಿಗೆ ಮುಕ್ತಿ ಸಿಗಲು ಏನು ಮಾಡಬೇಕೆಂದು ಪ್ರಾರ್ಥಿಸಿದನು.

 


 

ಅಲ್ಲಿದ್ದ ಸರ್ವಕಪನೆಂಬ ಮುನೀಂದ್ರನು,


"ನಿನ್ನ ತಾಯಿ ತಂದೆಯರು ಗೊತ್ತಿದ್ದೂ ರಜಸ್ವಲಾ ಮೈಲಿಗೆಯನ್ನಾಚರಿಸದೆ,
ಸಂಸರ್ಗ ದೋಷದಿಂದ ಪಶುಗಳಾಗಿ ಜನ್ಮತಾಳಿದ್ದಾರೆ.


ಅವರು ಪಾಪ ಮುಕ್ತರಾಗ ಬೇಕಾದರೆ ಋಷಿಪಂಚಮೀ ವ್ರತ ಮಾಡುವುದೊಂದೇ ಪರಿಹಾರ ಮಾರ್ಗ" ಎಂದು ವ್ರತವಿಧಿಯನ್ನು ಸುಮತಿಗೆ ತಿಳಿಸಿದರು.


ಮನೆಗೆ ಬಂದ ಸುಮತಿಯು ಭಾದ್ರಪದ ಶುದ್ಧಪಂಚಮಿಗಾಗಿ ಕಾಯುತ್ತಿದ್ದು,ಆ ದಿನ ಬರುತ್ತಲೇ,
ಪತ್ನಿ ಚಂದ್ರಮತಿಯೊಡನೆ ಭಕ್ತಿಯಿಂದ ವಿಧಿಯುಕ್ತವಾಗಿ ವ್ರತವನ್ನು,ನಂತರ ಉದ್ಯಾಪನೆಯನ್ನೂ ಮಾಡಿ,ವ್ರತದ ಪೂರ್ಣ ಫಲವನ್ನು ತಾಯಿತಂದೆಯರಿಗೆ ಧಾರೆ ಎರೆದನು.


ವ್ರತದ ಪುಣ್ಯ ಪ್ರಭಾವದಿಂದ ತಾಯಿಗೆ ಶ್ವಾನ ಜನ್ಮವೂ,ತಂದೆಗೆ ವೃಷಭ ಜನ್ಮವೂ ಹೋಗಿ,
ದೇವತಾ ಯೋಗ್ಯವಾದ ದೇಹಕಾಂತಿಯಿಂದ ಪ್ರಕಾಶಿಸುತ್ತ ಮುಕ್ತಿಯನ್ನು ಹೊಂದಿದರು.

ಹೀಗೆ ಈ ವ್ರತವನ್ನು ಮಾಡುವವರು,ವ್ರತದ ಕಥೆಯನ್ನು ಕೇಳುವವರು,ಮೋಕ್ಷವನ್ನು ಪಡೆಯುತ್ತಾರೆಂದು ಧರ್ಮರಾಯನಿಗೆ ಶ್ರೀಕೃಷ್ಣನು ಹೇಳಿದ ಕಥೆಯನ್ನು ಬ್ರಹ್ಮನು ಶ್ವೇತಾಶ್ವ ಮಹಾರಾಜನಿಗೆ ತಿಳಿಸಿದನು.

ಶ್ರೀ_ವಾಸುದೇವಾರ್ಪಣಮಸ್ತು.

                           -------------- Hari Om ------------

 

 

No comments:

Post a Comment