Monday, October 5, 2026

ಇಂದಿರಾ ಏಕಾದಶಿ ಮಹಿಮೆ -- Indira Ekadasi - its Glory

 

                                                                Indira Ekadasi

 

ಇಂದಿರಾ ಏಕಾದಶಿ ಮಹಿಮೆ -- Indira Ekadasi its Glory

ಗೋವಿಂದಂ ಪುಂಡರೀಕಾಕ್ಷಂ ಗಂಗಾಕಾಶಿಂ ಗಯಾಂ ತಥಾ ಗದಾಧರಂ ಸ್ಮರೇತ್ ಭಕ್ತ್ಯಾ ಶ್ರಾದ್ಧಸಾದ್ ಗುಣ್ಯ ಹೇತವೆ ||

ಭಾದ್ರಪದ ಕೃಷ್ಣಪಕ್ಷದಲ್ಲಿ ಬರುವ ಏಕಾದಶಿಗೆ ಇಂದಿರಾ ಏಕಾದಶಿ ಎನ್ನುತ್ತಾರೆ. .ಮಧುವೆಂಬ ರಾಕ್ಷಸನನ್ನು ಕೊಂದ ಮಧುಸೂದನನೇ ದಯವಿಟ್ಟುಇಂದಿರಾ ಏಕಾದಶಿಯ ಮಹತ್ವ ತಿಳಿಸು ಎಂದು ಪಾಂಡವರಾಜ ಯುಧಿಷ್ಠಿರ ಶ್ರೀಕೃಷ್ಣನನ್ನು ಕೇಳುತ್ತಾನೆ. ಆಗ ಶ್ರೀಕೃಷ್ಣ ದೃಷ್ಟಾಂತ ಸಹಿತ ತಿಳಿಸುತ್ತಾನೆ. ಈ ಏಕಾದಶಿ ಕುರಿತು ಬ್ರಹ್ಮ ವೈವರ್ತ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ದೃಷ್ಟಾಂತ : ಸತ್ಯಯುಗದಲ್ಲಿ ಇಂದ್ರಸೇನ ಎಂಬ ಬಲಿಷ್ಠ ರಾಜನಿದ್ದ. ಆತ ತನ್ನ ಶತ್ರುಗಳನ್ನೆಲ್ಲ ನಾಶಮಾಡಿ, ವಿಜೇತನಾಗಿ, ಧರ್ಮದಿಂದ ರಾಜ್ಯವಾಳುತ್ತಿದ್ದ. ಮಹಿಷ್ಮತಿಪುರಿ ಆತನ ರಾಜಧಾನಿಯಾಗಿತ್ತು. ತನ್ನ ಪ್ರಜೆಗಳನ್ನು ತನ್ನ ಕುಟುಂಬದವರಂತೆ ಕಾಣುತ್ತಿದ್ದ. ಆತನ ರಾಜ್ಯ ಸುಭೀಕ್ಷವಾಗಿತ್ತು. ಧರ್ಮಿಷ್ಠನಾದ ರಾಜ ಶ್ರೀವಿಷ್ಣುವಿನ ಪರಮ ಭಕ್ತನಾಗಿದ್ದ ಸದಾಕಾಲ ಗೋವಿಂದಾ ಗೋವಿಂದಾ ಎಂದು ನಾಮಜಪ ಮಾಡುತ್ತ ಜ್ಞಾನಾನಂದವಾದ ಆಧ್ಯಾತ್ಮದಲ್ಲಿ ಆಸಕ್ತಿಹೊಂದಿ ನಿರ್ಮಲವಾದ ಜೀವನ ನಡೆಸುತ್ತಿದ್ದ.

ಒಂದುದಿನ ರಾಜಾ ಇಂದ್ರಸೇನ ಪ್ರಸನ್ನವದನನಾಗಿ ಶಾಂತಚಿತ್ತನಾಗಿ ಆಸ್ಥಾನದಲ್ಲಿ ಕುಳಿತಿದ್ದ, ಆಗ ಆಕಾಶಮಾರ್ಗವಾಗಿ ನಾರದಮುನಿಗಳು ರಾಜನ ಆಸ್ಥಾನಕ್ಕೆ ಬಂದರು. ನಾರದರನ್ನು ಕಂಡ ರಾಜ ಅವರಿಗೆ ರಾಜ ಮರ್ಯಾದೆಯೊಂದಿಗೆ ಪಾದಪೂಜೆ ಮಾಡಿ ಸತ್ಕರಿಸಿದ. ಆಗ ನಾರದರು ಕೇಳುತ್ತಾರೆ. `ಓ,ರಾಜನೇ ನಿನ್ನ ಆಸ್ಥಾನದ ಏಳೂ ಅಂಗಗಳು ಅಂದರೆ ೧) ರಾಜ, ೨)ಮಂತ್ರಿ, ೩)ಖಜಾನೆ, ೪)ಸೈನ್ಯ, ೫) ಬಂಧುಗಳು, ೬) ಬ್ರಾಹ್ಮಣರು, ೭) ಪ್ರಜೆಗಳು ಸರಿಯಾಗಿರುವವೇ?

ಸದಾಕಾಲ ವಿಷ್ಣುವಿನ ಜಪಮಾಡುವುದರಲ್ಲೇ ಕಾಲಕಳೆಯುವಿಯಲ್ಲ ಅವರೆಲ್ಲರೊಡನೆ ನೀ ಹೇಗೆ ಕಾರ್ಯ ನಿರ್ವಹಿಸುವಿ ಎನ್ನುತ್ತಾರೆ. ಅದಕ್ಕೆ ರಾಜ ತಮ್ಮ ದಯೆಯಿಂದ ಎಲ್ಲವೂ ಸರಿಯಾಗಿದೆ. ನೀವೇ ಕಂಡಿದ್ದೀರಲ್ಲ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ನನ್ನ ಮೇಲೆ ಕರುಣೆತೋರಿ ತಾವು ಇಲ್ಲಿಗೆ ಆಗಮಿಸಿದ ಕಾರಣ ತಿಳಿಸಬೇಕು ಎನ್ನುತ್ತಾನೆ. ಆಗ ನಾರದರು ಹೇಳುತ್ತಾರೆ ನಾನು ಬ್ರಹ್ಮಲೋಕದಿಂದ ಯಮಲೋಕಕ್ಕೆ ಬಂದಾಗ ಯಮರಾನ ನನ್ನನ್ನು ಸತ್ಕರಿಸಿದ. ನಾನು ಅವನ ವಿಷ್ಣು ಭಕ್ತಿಯನ್ನು ಕೊಂಡಾಡಿದೆ.ಆಗ ನಾನು ನಿಮ್ಮ ತಂದೆಯನ್ನು ಕಂಡೆ. ನಿಮ್ಮ ತಂದೆ ಧರ್ಮಿಷ್ಠನಾಗಿದ್ದ ಏಕಾದಶಿ ವ್ರತವನ್ನು ಮುರಿದ ಕಾರಣ ಅವನಿಗೆ ಯಮಲೋಕ ಪ್ರಾಪ್ತವಾಯಿತು.

ನಿಮ್ಮ ತಂದೆ ನಿನಗೊಂದು ಸಂದೇಶ ಕಳುಹಿಸಿದ್ದಾರೆ ಅದೇನೆಂದರೆ, ಅವರು ನಿನ್ನನ್ನೇ ಕುರಿತು ಹೇಳಿದರು ಮಹಿಷ್ಮತಿಯಲ್ಲಿ ನನ್ನ ಮಗನಾದ ಇಂದ್ರಸೇನನೆಂಬ ರಾಜನಿದ್ದಾನೆ. ಆತನಿಗೆ ನಾನಿಲ್ಲಿರುವ ಸ್ಥಿತಿಯನ್ನು ವಿವರಿಸಿ. ಹಿಂದೆ ಮಾಡಿದ ಪಾಪಕಾರ್ಯದ ಫಲವಾಗಿ ನಾನು ಯಮಲೋಕದಲ್ಲಿ ಇರುವೆ. ಆತನಿಗೆ ಈ ವಿಷಯ ತಿಳಿಸು ಎಂದರು ಮತ್ತು ಇಂದ್ರಸೇನನಿಗೆ ಬರುವ ಇಂದಿರಾ ಏಕಾದಶಿ ವ್ರತ ಆಚರಿಸಿ ಸತ್ಪಾತ್ರರಿಗೆ ದಾನವನ್ನು ಮಾಡಿ ನಾನು ಮುಕ್ತಹೊಂದುವಂತೆ ಮಾಡು ಎಂದು ಹೇಳಿದ್ದಾರೆ ಎಂದರು.

                                                              another Picture

 

ನಾವೆಲ್ಲರೂ ಪರಮಾತ್ಮನ ಛಾಯೆಯಂತೆ, ಭಗವಂತನ ಕರುಣೆಯಿಂದ ಭೂಮಿಗೆ ಬಂದಿದ್ದೇವೆ ಮತ್ತೆ ಮರಳಿ ನಾವು ಸೇರುವುದು ನಾರಾಯಣನನ್ನೇ ಎಂದು ಗರುಡ ಪುರಾಣದಲ್ಲಿ ಹೇಳಿದ್ದಾರೆ. ಆದರೆ ಪ್ರಾರಭ್ಧವಶಾತ್ ಯಾರಾದರೂ ನರಕದಲ್ಲಿ ಹೊರಳಾಡುತ್ತಿದ್ದರೆ ಶ್ರೀಕೃಷ್ಣನನ್ನು ನೆನೆಯುವುದು ಅವರಿಗೆ ಅಸಾಧ್ಯ.

ನರಕದಲ್ಲಿ ಮನಸ್ಸಿಗೆ ಶಾಂತತೆ ಇರುವುದಿಲ್ಲ. ಯಮದೂತರು ತೊಂದರೆ ಕೊಡುತ್ತಿರುತ್ತಾರೆ. ನರಕದ ಕಷ್ಟ ಬಲುಘೋರ, ತಾಳಲಾಗದ ನೋವನ್ನು ಅವರು ಅನುಭವಿಸುತ್ತಾರೆ. ಹಾಗಾಗಿ ಆ ವ್ಯಕ್ತಿಯ ಬಂಧುಗಳು ಆತನ ಸದ್ಗತಿಗಾಗಿ ಹಾಗೂ ಪಾಪ ಪರಿಹಾರಕ್ಕಾಗಿ ಪ್ರಾಯಶ್ಚಿತ್ತ ರೂಪವಾಗಿ ಉಪವಾಸ ವ್ರತ ಆಚರಿಸಿ, ದಾನ ಮಾಡಿದರೆ ಆತ ನರಕದಿಂದ ಮುಕ್ತಿ ಹೊಂದಲು ಸಾಧ್ಯ. ಆತನ ಪರವಾಗಿ ಅವನ ಬಂಧುಗಳು ಏಕಾದಶಿ ವ್ರತ ಮಾಡಿದರೂ ಅವರಿಗೆ ಸದ್ಗತಿ ಆಗುತ್ತದೆ ಎಂಬುದನ್ನು ಬ್ರಹ್ಮವೈವರ್ತ ಪುರಾಣ ತಿಳಿಸುತ್ತದೆ.

ರಾಜನೇ, ನಿಮ್ಮ ತಂದೆಯ ಸಂದೇಶ ತಿಳಿಸಿರುವೆ. ನೀನೂ ಸಹ ಇಂದಿರಾ ಏಕಾದಶಿ ಆಚರಿಸಿ ನಿಮ್ಮ ತಂದೆಗೆ ನರಕದಿಂದ ಮುಕ್ತಿ ಹೊಂದಲು ಪುತ್ರ ಕರ್ತವ್ಯವನ್ನು ಮಾಡು ಎಂದರು. ನಾರದರಿಂದ ಇಂದಿರಾ ಏಕಾದಶಿ ವ್ರತಾಚರಣೆ ವಿಧಿ-ವಿಧಾನ, ಮಹತ್ವವನ್ನು ತಿಳಿದು ಇಂದ್ರಸೇನ ವ್ರತವನ್ನು ಆಚರಿಸಿದ. ಇದರಿಂದ ರಾಜನ ಜನ್ಮದಾತ ತಂದೆಗೆ ಪ್ರಾಪ್ತವಾದ ಘೋರನರಕದ ಕಷ್ಟ ಪರಿಹಾರವಾಯಿತು. ಅವರು ತಮ್ಮ ಪಿತೃಗಣವನ್ನು ಸೇರಿ ವಿಷ್ಣುಪಾದವನ್ನು ಹೊಂದಿದರು.

ಯಾರು ಈ ಏಕಾದಶಿ ಮಹಾತ್ಮೆ ಕೇಳುವರೋ ಅವರು ಈ ಲೋಕದಲ್ಲಿ ಸಂತೋಷದ ಜೀವನ ನಡೆಸುತ್ತಾರೆ. ಎಲ್ಲ ಪಾಪದಿಂದ ಮುಕ್ತಿಹೊಂದಿ ಸಾವಿನ ನಂತರ ಮತ್ತೆ ದೇವಲೋಕಕ್ಕೆ ತೆರಳುವರು. ಅವರಿಗೆ ಪುನರ್ಜನ್ಮ ಇರುವದಿಲ್ಲ. ಈ ಏಕಾದಶಿ ವ್ರತದ ಆಚರಣೆಯಿಂದ ನರಕದಲ್ಲಿದ್ದ ಹಿರಿಯರು ಮಾಡಿದ ಪಾಪಗಳು ಪರಿಹಾರವಾಗಿ ಮುಕ್ತಿಹೊಂದುವರು. ವ್ರತ ಆಚರಿಸಿದವರಿಗೆ ಸೌಖ್ಯ ಲಭಿಸಿ ಅಶ್ವಮೇಧಯಾಗದ ಫಲ ಪ್ರಾಪ್ತಿಯಾಗುವುದು.

---------------------------- Hari Om ------------------------



 

No comments:

Post a Comment