Tuesday, February 4, 2025

Ratha Saptami Acharane

 

ರಥಸಪ್ತಮಿ ಆಚರಣೆ---- Rathasaptami -- celebration

 

 

                                                                 Lord Surya or Sun God


ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ ಅಧಿದೇವತೆಯು ಸೂರ್ಯ ಆಗಿರುವುದರಿಂದ, ಸೂರ್ಯ ಆರಾಧನೆಯ 'ರಥ ಸಪ್ತಮಿ' ದಿನವೆಂದು ಆಚರಿಸಲಾಗುತ್ತದೆ.

ವೈವಸ್ವತ ಮನ್ವಂತರದ ಆರಂಭದ ದಿನ. ಸೂರ್ಯನು ಉತ್ತರಾಯಣನಾಗಿ ಸಪ್ತಾಶ್ವಗಳ ರಥವನ್ನೇರಿ, ಉತ್ತರದಿಕ್ಕಿನ ಮಾರ್ಗದಲ್ಲಿ ಹೊರಟ ದಿನ.



ರಥ ಸಪ್ತಮಿ ದಿವಸ ರೋಗ ನಿವಾರಣೆ, ದೇಹದಾರ್ಡ್ಯ ಹಾಗೂ ಉತ್ತಮ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕೆಂಬ ನಿಯಮವಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ. ರೋಗದಿಂದ ನರಳುವವರು ಈ ದಿವಸ ಸೂರ್ಯಾರಾಧನೆಯನ್ನು ಮಾಡಿದರೆ ಬೇಗ ಗುಣಮುಖರಾಗುತ್ತಾರೆ.



ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಬಹುದು. ಏಕೆಂದರೆ ಈ ಅಭ್ಯಾಸವು ಮನಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ಪರಿಣಾಮಕಾರಿಯಾಗಿದೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳು ಸೂರ್ಯನಿಂದ ನಡೆಯುತ್ತಿದೆ.



ರಥಸಪ್ತಮಿ ದಿನದಂದು ಸೂರ್ಯೋದಯಕ್ಕೆ ಸರಿಯಾಗಿ ನದಿ, ಸಮುದ್ರ, ಸರೋವರ, ಸಂಗಮ ಮುಂತಾದೆಡೆ ಸ್ನಾನ ಮಾಡಿ ಸೂರ್ಯನಿಗೆ 'ಅರ್ಘ್ಯ' ನೀಡಿದರೆ ಪೂರ್ವ ಜನ್ಮದ ಪಾಪಗಳು ಹಾಗೂ ಈ ಜನ್ಮದ ಸಕಲ ದುಃಖಗಳು ಪರಿಹಾರವಾಗುತ್ತವೆ. ಸೂರ್ಯೋದಯಕ್ಕೆ ಮಾಡುವ ಮಾಘಸ್ನಾನ ಪುಣ್ಯಪ್ರದವಾದುದು. ಆಯುಷ್ಯ, ಆರೋಗ್ಯ ಸಂಪತ್ತು ಲಭಿಸುವುದಲ್ಲದೆ, ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆಂದು ಪುರಾಣದಲ್ಲಿದೆ.

‌ ‌ ‌
ರಥ ಸಪ್ತಮಿಯು ಯಾವಾಗಲೂ ಅರುಣೋದಯ ವ್ಯಾಪಿನಿಯಾಗಿರುವುದರಿಂದ ಸರಿಯಾಗಿ ಸೂರ್ಯೋದಯಕ್ಕೆ ಆಚರಣೆ ಮಾಡಬೇಕು. ರಥ ಸಪ್ತಮಿಯಂದು ಸೂರ್ಯೋದಯ ಕಾಲಕ್ಕೆ ಸ್ನಾನ ಮಾಡಬೇಕು.

 

ಏಳು ಎಕ್ಕದ ಎಲೆಯನ್ನು ತಲೆ, ಭುಜ, ಮೊಣಕಾಲು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸ್ನಾನಮಾಡುವುದು ವಿಶೇಷ. ಸ್ನಾನಕಾಲಕ್ಕೆ ಪಠಿಸಬೇಕಾದ ಮಂತ್ರಗಳು -

ಯದ್ಯಜ್ಜನ್ಮಕೃತಂ ಪಾಪಂ ಮಯಾ ಸಪ್ತಸು ಜನ್ಮಸು |

ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ || ||

ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |

ಮನೋವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ || ||

ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತಸಪ್ತಿಕೇ |

ಸಪ್ತವ್ಯಾಧಿಸಮಾಯುಕ್ತಂ ಹರ ಮಾಕರಿ ಸಪ್ತಮೀ || || 

 

ಹೀಗೆ ಯಾರು ಈ ಮೂರು ಮಂತ್ರೋಚ್ಚಾರಣ ಪೂರಕ ಸ್ನಾನ ಮಾಡಿ ಸೂರ್ಯ ಮತ್ತು ಕೇಶವನ ದರ್ಶನವನ್ನು ಮಾಡುತ್ತಾರೋ, ಅವರು ಕ್ಷಣಮಾತ್ರದಲ್ಲಿ ಪಾಪಗಳಿಂದ ಮುಕ್ತರಾಗುವರು. (ನಿರ್ಣಯಸಿಂಧು)

 

                                                          Ratha Saptami Rangoli


ಸ್ನಾನಾನಂತರ ಸೂರ್ಯ ಮತ್ತು ಸಪ್ತಮಿ ತಿಥಿಗೆ ಅರ್ಘ್ಯ -

ಒಂದು ತಾಮ್ರದ ಕಲಶದಲ್ಲಿ (ತಂಬಿಗೆ) ಶುದ್ಧವಾದ ಜಲ, ಅಕ್ಷತೆ, ಚಂದನ, ಬಿಳಿಬಣ್ಣದ ಹೂವುಗಳು, ಗರಿಕೆ, ಎಕ್ಕೆಯ ಎಲೆಗಳನ್ನು ತುಂಬಿಸಿ, ಮುಂದಿನ ಮಂತ್ರಗಳಿಂದ ಸೂರ್ಯ ಮತ್ತು ಸೂರ್ಯಜನನಿಯಾದ ಸಪ್ತಮೀ ತಿಥಿಗೂ ಸಹ ಅರ್ಘ್ಯವನ್ನು ಕೊಡಬೇಕು.

ಸೂರ್ಯಾರ್ಘ್ಯ ಮಂತ್ರ -

ಸಪ್ತಸಪ್ತಿವಹ ಪ್ರೀತ ಸಪ್ತಲೋಕಪ್ರದೀಪನ |

ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ||

ಎಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಬೇಕು.

ಸಪ್ತಮೀ ಅರ್ಘ್ಯಮಂತ್ರ -

ಜನನೀ ಸರ್ವಲೋಕಾನಾಂ ಸಪ್ತಮೀ ಸಪ್ತಸಪ್ತಿಕೇ |

ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯಮಂಡಲೇ ||

ಎಂದು ಸಪ್ತಮೀ ತಿಥಿಯ ಕುರಿತು ಅರ್ಘ್ಯ ಕೊಡಬೇಕು.

ರಥಸಪ್ತಮಿಯ ಪರ್ವ ಎಲ್ಲಾ ರಾಶಿಯವರಿಗೂ ವಿಶೇಷ ಫಲಪ್ರದ. ಸೂರ್ಯನು ಯಾವುದೇ ಜಾತಕದಲ್ಲಿ ಆತ್ಮರೂಪಿಯಾಗಿ ಇರುತ್ತಾನೆ, ಆದ್ದರಿಂದ ಅವನ ಪ್ರೀತ್ಯರ್ಥ ಪೂಜಾಕಾರ್ಯ ಆರೋಗ್ಯ, ಸಂಪತ್ತು ಮತ್ತು ಆನಂದಪ್ರದ.


---------- Hari Om ---------

 




No comments:

Post a Comment