Saturday, November 1, 2025

Tulasi Pooje


                                                                         Tulasi Plant

 

ಶ್ರೀ ತುಳಸೀ ಪೂಜೆ ‌-- Sri Tulasi Pooje


‌ ‌ ‌ ‌ ಶ್ರೀ ಹರಿಯ ಕಣ್ಣುಗಳಿಂದ ಆನಂದಾಶ್ರುಗಳು ಉದುರಿ ತುಳಸಿ ರೂಪಧಾರಣೆಯಾಯಿತು.

ಮಹಾವಿಷ್ಣುವು ಈ ಚಾತುರ್ಮಾಸದ ನಾಲ್ಕು ಮಾಸಗಳ ಕಾಲದ ಶಯನಾವಸ್ಥೆಯಿಂದ ಏಳುತ್ತಾನೆ !! ಎಂದರೆ ಎಚ್ಚರಗೊಳ್ಳುತ್ತಾನೆ ! ದಕ್ಷಿಣಾಯನದ ಮೊದಲ ೪ ಮಾಸ ಅಂದರೆ ಆಷಾಢ ಮಾಸದ ಶುಕ್ಲಪಕ್ಷದ ದಶಮಿಯಿಂದ -- ಕಾರ್ತೀಕ ಮಾಸದ ಶುಕ್ಲ ಪೌರ್ಣಮಿಯವರೆಗೆ ಚಾತುರ್ಮಾಸ ! ಈ ಚಾತುರ್ಮಾಸ ಭಗವಂತನಿಗೆ ಬಹಳ ಪ್ರಿಯವಾದದ್ದು. ಈ ನಾಲ್ಕು ಮಾಸಗಳಲ್ಲಿ ವಿಷ್ಣುವು ಶ್ರೀಧರ, ಹೃಷಿಕೇಶ, ಪದ್ಮನಾಭ ಮತ್ತು ದಾಮೋದರ ಎನ್ನುವ ನಾಮಗಳಿಂದ ಆರಾಧಿಸಲ್ಪಡುತ್ತಾನೆ. ನಾಲ್ಕು ಮಾಸ ಭಗವಂತ ಯೋಗನಿದ್ರೆಯಲ್ಲಿದ್ದು ಕಾರ್ತಿಕ ಉತ್ಥಾನ ದ್ವಾದಶಿಯಂದು ಎಚ್ಚರಗೊಳ್ಳುವನು! ಎಲ್ಲಾ ಮಠಗಳಲ್ಲಿ ಇಂದಿಗೆ ಚಾತುರ್ಮಾಸ ವ್ರತರಾಚರಣೆಯೂ ಮುಗಿಯುತ್ತದೆ. ಈ ದಿನದ ಆರಾಧ್ಯದೇವತೆ ತುಳಸಿ. ಇಂದೇ ಶ್ರೀ ಕೃಷ್ಣನೊಂದಿಗೆ ತುಳಸಿಯ ವಿವಾಹ ನಡೆಯಿತೆಂದು ಹೇಳಲಾಗುತ್ತದೆ.

ಶ್ರೀ ಕೃಷ್ಣನಿಗೆ ಬಹಳ ಪ್ರಿಯವಾದವಳು ತುಳಸಿ - " ಒಂದು ದಳ ಶ್ರೀ ತುಳಸಿ ಬಿಂದು ಗಂಗೋದಕವು ಇಂದಿರಾರಮಣನಿಗೆ ಅರ್ಪಿತವೆಂಬಂತೆ, ಒಲ್ಲನೋ ಹರಿ ಕೊಳ್ಳನೋ ತುಳಸಿ ಇಲ್ಲದಾ ಪೂಜೆ ! ಎಂಬಂತೆ ಯಾವುದೇ ಭಕ್ಷಭೋಜ್ಯವನ್ನು ನೈವೇದ್ಯಕ್ಕಿಟ್ಟರೂ ಅದರ ಮೇಲೆ ಒಂದುದಳ ತುಳಸಿ ಹಾಕಿ ಕೃಷ್ಣಾರ್ಪಣ ಎಂದರೆ ಮಾತ್ರ ಶ್ರೀಹರಿ ಸ್ವೀಕರಿಸುವನು ಎಂಬುದು ನಿತ್ಯಸತ್ಯವಾಗಿದೆ !!

ಇಂದು ತುಳಸಿಯ ಜನ್ಮ ದಿನವೂ ಆಗಿದೆ, ಈಕೆಯ ಮಹಿಮೆ ಅಪಾರವಾಗಿದೆ. ಸಮುದ್ರಮಂಥನ ಕಾಲದಲ್ಲಿ ವಿಷ್ಣುವು ಅಮೃತಕಲಶ ಹಿಡಿದು ಬರುವಾಗ ಪರಮಾತ್ಮನ ಕಣ್ಣು ಗಳಿಂದ ಅಶ್ರುಗಳು ಕೆಳಗೆಬಿದ್ದವಂತೆ; ಆಗ ಜನ್ಮತಾಳಿದ ತುಳಸಿ ಕೃಷ್ಣನನ್ನು ಒಲಿಸಿಕೊಳ್ಳಲು ಘೋರ ತಪಸ್ಸನ್ನು ಆಚರಿಸಿದಳಂತೆ. ಆಗ ಕೃಷ್ಣಪ್ರತ್ಯಕ್ಷನಾಗಿ ಕಾರ್ತಿಕ ಮಾಸದ ದ್ವಾದಶಿಯಂದು ವಿವಾಹವಾಗುವುದಾಗಿ ತಿಳಿಸಿದನೆಂದೂ, ಮತ್ತೆ ಕೆಲವರು ಜಲಂಧರನೆಂಬ ರಾಕ್ಷಸನ ಮಡದಿಯಾದ ವೃಂದಾ ಮಹಾ ಪತಿವ್ರತೆ ಲೋಕಕಂಟಕನಾದ ಜಲಂಧರನನ್ನು ಮಡದಿಯ ಪಾತಿವ್ರತ್ಯದ ಮಹಿಮೆಯಿಂದ ದೇವಾನು ದೇವತೆಗಳಿಂದಲೂ ಸೋಲಿಸಲಾಗದಿರಲು ಮಹಾವಿಷ್ಣುವಿನ ಮೊರೆಹೋದಾಗ - ವೃಂದೆಯ ಪಾತಿವ್ರತ್ಯಕ್ಕೆ ಭಂಗವುಂಟುಮಾಡಲು ವಿಷ್ಣುವು ಜಲಂಧರ ರಾಕ್ಷಸನ ವೇಷಧಾರಿಯಾಗಿ ವೃಂದೆಯಿಂದ ಸೇವೆಪಡೆದು ಅವಳ ಪಾತಿವ್ರತ್ಯ ಭಂಗಗೊಳಿಸಿ ರಾಕ್ಷಸನನ್ನು ಹತ್ಯೆಗೈಯುತ್ತಾನೆ.

ಆಗ ಪತಿವ್ರತೆ ವೃಂದೆ ವಿಷ್ಣುವಿಗೆ ಸಾಲಿಗ್ರಾಮ ಶಿಲೆಯಾಗೆಂದು ಶಾಪವಿತ್ತು ಚಿತೆಯೇರುತ್ತಾಳೆ. ಮುಂದೆ ಅವಳೇ ತುಳಸಿಯಾಗಿ ಜನ್ಮತಾಳುತ್ತಾಳೆ ! ಆ ಪತಿವ್ರತೆಯ ಪಾತಿವ್ರತ್ಯ ಭಂಗಗೊಳಿಸಿದ್ದಕ್ಕೆ ವಿಷ್ಣು ಅವಳ ಮರುಜನ್ಮದಲ್ಲಿ ತುಳಸಿಯನ್ನು ವಿವಾಹವಾಗುತ್ತಾನೆ. ಈಗಲೂ ಸಾಲಿಗ್ರಾಮದ ಮೇಲೆ ತುಳಸಿಯನ್ನು ಇರಿಸಿಯೇ ಪೂಜಿಸುವ ಪದ್ದತಿ ಮುಂದುವರೆದಿದೆ. ಈಗಲೂ ಪ್ರತೀ ಮಹಿಳೆಯರೂ ತಮ್ಮ ಪತಿಯ ಒಳಿತಿಗಾಗಿ ಸೌಭಾಗ್ಯಕ್ಕಾಗಿ ತುಳಸೀಪೂಜೆ ಮಾಡುವ ಪದ್ಧತಿ ನಡೆದು ಬಂದಿದೆ.

 

                                                              Sri Krishna Tulasi

 

"ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾ
ಯದಗ್ರೇ ಸರ್ವವೇದಾಶ್ಚ ತುಲಸೀ ತ್ವಾಂ ನಮಾಮ್ಯಹಮ್"

ಮನೆಯಲ್ಲಿರುವ ತುಳಸೀ ಬೃಂದಾವನವನ್ನು ತೊಳೆದು ಸುಣ್ಣಬಣ್ಣ ಹಚ್ಚಿ ಸುಂದರವಾಗಿ ಸಿಂಗರಿಸಿ. ಸಾಧ್ಯವಾದವರು ಹಳ್ಳಿಕಡೆ ಚಪ್ಪರವನ್ನೂ ಕಟ್ಟಿ ಮಾವಿನ ತೋರಣ, ಬಾಳೆಕಂದು ಕಬ್ಬಿನ ಜಲ್ಲೆ ಕಟ್ಟಿ ಮಂಟಪವನ್ನು ಕಟ್ಟಿ ಸುಂದರವಾಗಿ ಸಿಂಗರಿಸಿ, ತುಳಸೀಗಿಡವಿರುವ ಬೃಂದಾವನದಲ್ಲಿ ನೆಲ್ಲಿ ಗಿಡವನ್ನು ಇರಿಸಿ, ಶ್ರೀ ಕೃಷ್ಣನ ವಿಗ್ರಹ ಅಥವಾ ಪಟವನ್ನು ಇರಿಸಿ (ನೆಲ್ಲಿಗಿಡದಲ್ಲಿ ಕೃಷ್ಣನು ದಾಮೋದರ ರೂಪಿಯಾಗಿರುತ್ತಾನೆ ) ಬೃಂದಾವನದ ಸುತ್ತಲೂ ದೀಪವಿರಿಸಬೇಕು.


ಮುಂಭಾಗದಲ್ಲಿ ಸುಂದರ ರಂಗೋಲಿ ಹಾಕಿ ಸುತ್ತಲೂ ದೀಪಗಳನ್ನು ಬೆಳಗಿಸಿ,
ಶೋಡಶೋಪಚಾರದಿಂದ, ಅರಿಶಿನ-ಕುಂಕುಮ, ಗಂಧ, ವಸ್ತ್ರ ಹೂವುಗಳಿಂದ ಅರ್ಚಿಸಿ ಪೂಜಿಸಿ ಕೃಷ್ಣತುಳಸಿಯರನ್ನು ಸೇರಿಸಿ ಹೂವಿನಮಾಲೆಹಾಕಿ. (ಕೆಲವರು ತುಳಸಿಗೆ ಸೀರೆ ಉಡಿಸಿ ಕೃಷ್ಣನಿಗೆ ಮುಗುಟ ಉಡಿಸಿ ತುಳಸಿಗೆ ತಾಳಿಯನ್ನೂ ಸಹ ಕಟ್ಟಿ ಶಾಸ್ತ್ರೋಕ್ತವಾಗಿ ವಿವಾಹವನ್ನೇ ಮಾಡುತ್ತಾರೆ) ಪೂಜಿಸುತ್ತಾರೆ. ಮದುವೆಯ ಎಲ್ಲಾ ಶಾಸ್ತ್ರಗಳನ್ನೂ ಮಾಡುತ್ತಾರೆ. ವಿವಿಧ ಬಗೆಯ ಉಂಡೆಗಳನ್ನು, ಪಾಯಸವನ್ನು ಶ್ರೀ ಹರಿಸಮೇತ ತುಳಸಿಗೆ ಅರ್ಪಿಸಿ ಮಹಾಮಂಗಳಾರತಿ ಮಾಡಿ ಪ್ರದಕ್ಷಿಣೆ ನಮಸ್ಕಾರ ಮಾಡುತ್ತಾರೆ. ಆರತಿ ತಟ್ಟೆಯಲ್ಲಿ ಸ್ವಲ್ಪ ಅಕ್ಕಿಹಾಕಿ ಐದು ನೆಲ್ಲಿ ಕಾಯಿಯನ್ನಿರಿಸಿ ಅದರ ಮೇಲೆ ತುಪ್ಪದ ಬತ್ತಿಗಳನ್ನು ಇರಿಸಿಕೊಂಡು ಆರತಿಮಾಡುವುದು ವಿಶೇಷವಾಗಿದೆ.


ಸೌಭಾಗ್ಯ ಸಂಪತ್ತನ್ನು ಚಿರಕಾಲ ನೀಡೆಂದು ಬೇಡುತ್ತಾ, ಅಕ್ಕಪಕ್ಕದ ಮನೆಯವರನ್ನು ಕುಂಕುಮಕ್ಕೆ ಕರೆದು ಬಾಗಿನಕೊಟ್ಟು ನಮಸ್ಕರಿಸಬೇಕು. ಹೊಸದಾಗಿ ಮದುವೆಯಾದ ಹೊಸ ದಂಪತಿಗಳನ್ನು ಕರೆದು ಹಾಲುಹಣ್ಣು ತಾಂಬೂಲಕೊಟ್ಟು ಸತ್ಕರಿಸಿದರೆ ; ಅವರ ದಾಂಪತ್ಯಸುಖ ಹೆಚ್ಚುವುದೆಂದು ಹಿರಿಯರು ಹೇಳುತ್ತಿದ್ದರು. ಸ್ನೇಹಿತರೇ ಬನ್ನಿ ನಾವೂ ತುಳಸೀ ಹಬ್ಬವನ್ನು ಸಂತಸದಿಂದ ಆಚಿರಿಸಿ ತುಳಸೀಸಮೇತನಾದ ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗೋಣ ! ಮಾರ್ಕೆಟ್ ನಲ್ಲಿ ಇಂದಿನಿಂದಲೇ ತುಳಸೀಗಿಡದ ಪಾಟ್ ಗಳು , ನೆಲ್ಲಿಗಿಡದ ಟೊಂಗೆಗಳೂ , ಹೂವು ಹಣ್ಣುಗಳು ಬಂದು ನಿಮಗಾಗಿ ಕಾಯುತ್ತಿವೆ !!

ಇನ್ನು ಆಯುರ್ವೇದದಲ್ಲಂತೂ " ತುಳಸಿಯೇ ಅಧಿದೇವತೆ " ತುಳಸಿಯಲ್ಲಿರುವಷ್ಟು ಔಷದೀಯಗುಣಗಳು ಬೇರಾವುದರಲ್ಲೂ ಇಲ್ಲ ! ಪ್ರತೀದಿನ ಇದರ ಗಾಳಿಕುಡಿದರೂ ಸಾಕು ಅದರಿಂದ ಅನೇಕ ಖಾಯಿಲೆಗಳು ವಾಸಿಯಾಗುತ್ತದೆ !! ತುಳಸೀ ಬೃಂದಾವನವಿರದ ಮನೆಯೇ ಇರುವುದಿಲ್ಲ ! ಮನೆಯ ಮುಂದೆ ತುಳಸಿಯಿದ್ದರೆ ದುಷ್ಟಶಕ್ತಿಗಳ ಕಾಟವೂ ಇರುವುದಿಲ್ಲವಂತೆ !! ಅಂತಹಾ ಶಕ್ತಿ ಮಹಿಮಾವಂತಳು ಈ ತುಳಸೀದೇವಿ.

                                                        Saligrama 

 

"ಪ್ರಸೀದ ತುಳಸೀ ದೇವಿ ಪ್ರಸೀದ ಹರಿವಲ್ಲಭೇ |
ಕ್ಷೀರೋದ ಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್ " ||


ತುಳಸಿಯನ್ನು ಪೂಜಿಸುವುದು ಹೇಗೆ..? ಈ ಮಂತ್ರಗಳನ್ನೇ ಪಠಿಸಿ..!


ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಪ್ರತಿನಿತ್ಯ ಪೂಜಿಸಲಾಗುತ್ತದೆ. ಅದರಲ್ಲೂ ತುಳಸಿ ಪೂಜೆ ದಿನದಂದು ವಿಶೇಷವಾದ ಪೂಜೆಯನ್ನು ನೆರವೇರಿಸಲಾಗುತ್ತದೆ.

ಹಿಂದೂ ಧರ್ಮದಲ್ಲಿ ತುಳಸಿ ಬಹಳ ಮುಖ್ಯ. ಇದನ್ನು ಅತ್ಯಂತ ಪೂಜ್ಯವೆಂದು ಪರಿಗಣಿಸಲಾಗುತ್ತದೆ. ಪದ್ಮಪುರಾಣದ ಪ್ರಕಾರ, ತುಳಸಿ ನಾಮವನ್ನು ಪಠಿಸುವ ಮೂಲಕ ವಿಷ್ಣು ತುಂಬಾ ಸಂತೋಷಹೊಂದಿದ್ದಾನೆ. ಯಾವ ಮನೆಯಂಗಳದಲ್ಲಿ ತುಳಸಿ ಇರುತ್ತದೆಯೋ ಆ ಮನೆಯಲ್ಲಿ ಯಾವುದೇ ತೊಂದರೆ ಇರುವುದಿಲ್ಲ ಎನ್ನುವ ನಂಬಿಕೆಯಿದೆ. ಪುರಾಣಗಳ ತಜ್ಞರ ಪ್ರಕಾರ, ತುಳಸಿಯ ಆರಾಧನೆಯು ಶ್ರೀಕೃಷ್ಣನನ್ನು ನೇರವಾಗಿ ಪ್ರತಿಬಿಂಬಿಸುತ್ತದೆ. ತುಳಸಿಯನ್ನು ಪೂಜಿಸುವ ಭಕ್ತನನ್ನು ಕೃಷ್ಣನು ಎಂದಿಗೂ ಮೆಚ್ಚುತ್ತಾನೆ. ಪದ್ಮಪುರಾಣ ಪ್ರಕಾರ, ದ್ವಾದಶಿ ರಾತ್ರಿ ತುಳಸಿ ಸ್ತೋತ್ರವನ್ನು ಪಠಿಸಬೇಕು. ಈ ದಿನ ಭಗವಾನ್ ವಿಷ್ಣು ಭಕ್ತರ ಎಲ್ಲಾ ಪಾಪಗಳಿಗೆ ಮೋಕ್ಷವನ್ನು ನೀಡುತ್ತಾನೆ.

ತುಳಸಿಗೆ ಅರ್ಘ್ಯ ಅರ್ಪಿಸುವಾಗ ಈ ಮಂತ್ರ ಪಠಿಸಿ

ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನೀ
ಆದಿ ವ್ಯಾಧಿಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ ||

ತುಳಸಿ ಧ್ಯಾನ ಮಂತ್ರ

ದೇವೀ ತ್ವಂ ನಿರ್ಮಿತಾ ಪೂರ್ವಮರ್ಚಿತಾಸಿ ಮುನಿಶ್ವರೈಃ |
ಮನೋ ನಮಸ್ತೇ ತುಳಸೀ ಪಾಪಂ ಹರ ಹರಿಪ್ರಿಯೇ ||

​​ತುಳಸಿ ಪೂಜೆ ಸಮಯದಲ್ಲಿ ಈ ಮಂತ್ರ ಪಠಿಸಿ

ತುಳಸಿ ಶ್ರೀರ್ಮಹಾಲಕ್ಷ್ಮೀರ್ವಿದ್ಯಾ ವಿದ್ಯಾ ಯಶಸ್ವಿನೀ |

ಧರ್ಮಾ ಧರ್ಮಾನನಾ ದೇವೀ ದೇವೀದೇವಮನಃ ಪ್ರಿಯಾ ||

ಲಭತೇ ಸುತರಾಂ ಭಕ್ತಿಮಂತೇ ವಿಷ್ಣುಪದಂ ಲಭೇತ್‌ |

ತುಳಸಿ ಭೂರ್ಮಹಾಲಕ್ಷ್ಮೀಃ ಪದ್ಮಿನೀ ಶ್ರೀಹರಿಪ್ರಿಯಾ ||


ಧನ - ಸಂಪತ್ತು, ಸಮೃದ್ಧಿ, ವೈಭವ, ಸುಖ, ಸಮೃದ್ಧಿಗಾಗಿ ತುಳಸಿ ನಾಮಾಷ್ಟಕ ಮಂತ್ರ :


ವೃಂದಾ ವೃಂದಾವನೀ ವಿಶ್ವಪೂಜಿತಾ ವಿಶ್ವಪಾವನೀ |

ಪುಷ್ಪಸಾರಾ ನಂದನೀಯ ತುಳಸಿ ಕೃಷ್ಣ ಜೀವನೀ |

ಏತಭಾಮಾಂಷ್ಟಕ ಚೈವ ಸ್ತೋತಂ ನಾಮರ್ಥಂ ಸಂಯುತಂ|

ಯಃ ಪಠೇತ್‌ ತಾಂ ಚ ಸಂಪೂಜ್ಯ ಸೌಶ್ರಮೇಘ ಫಲಂಲಮೇತಾ||

 

                                                                                   Pic-1

 

ತುಳಸಿ ಎಲೆ ಕೀಳುವಾಗ ಈ ಮಂತ್ರ ಜಪಿಸಿ


ಓಂ ಸುಭದ್ರಾಯ ನಮಃ ಓಂ ಸುಪ್ರಭಾಯ ನಮಃ ಮಾತಸ್ತುಳಸಿ ಗೋವಿಂದ ಹೃದಯಾನಂದ ಕಾರಿಣೀ ನಾರಾಯಣಸ್ಯ ಪೂಜಾರ್ಥಂ ಚಿನೋಮಿ ತ್ವಾಂ ನಮೋಸ್ತುತೇ||



ತುಳಸಿ ಗಾಯತ್ರಿ ಮಂತ್ರ


ಓಂ ಶ್ರೀ ತುಳಸ್ಯೈ ಚ ವಿದ್ಮಹೇ ವಿಷ್ಣು ಪ್ರಿಯಾಯೈ ಧೀಮಹೀ
ತನ್ನೋಃ ವೃಂದಾ ಪ್ರಚೋದಯಾತ್‌

 

ತುಳಸಿಯ ಇತರ ಹೆಸರುಗಳು ಮತ್ತು ಅರ್ಥ


ವೃಂದಾ - ಎಲ್ಲಾ ಸಸ್ಯವರ್ಗ ಮತ್ತು ಮರಗಳ ಆದಿ ದೇವಿ

ವೃಂದಾವನಿ - ಯಮುನಾ ನದಿಯ ತಟದಲ್ಲಿ ಹುಟ್ಟಿದವಳು

ವಿಶ್ವ ಪೂಜಿತಾ - ವಿಶ್ವದಾದ್ಯಂತ ಪೂಜಿಸಲ್ಪಡುವವಳು

ವಿಶ್ವಪಾವನಿ - ಪವಿತ್ರ ತ್ರಿಲೋಕಿ

ಪುಷ್ಪಸಾರ - ಪ್ರತಿ ಹೂವಿನ ಸಾರ

ನಂದಿನಿ - ಋಷಿ ಮುನಿಗಳಿಗೆ ಸಂತೋಷವನ್ನು ನೀಡುವಳು

ಕೃಷ್ಣಜೀವನೀ - ಶ್ರೀ ಕೃಷ್ಣನ ಜೀವ

ತುಳಸಿ - ವಿಶಿಷ್ಟ ಅಥವಾ ಅದ್ವಿತೀಯ

 

                                                                               Pic - 2

 

ತುಳಸಿ ಪೂಜಾ ವಿಧಿ


ಬೆಳಿಗ್ಗೆ ಸ್ನಾನ ಮಾಡಿದ ನಂತರ, ಮನೆಯ ಅಂಗಳದಲ್ಲಿ ಅಥವಾ ದೇಗುಲದಲ್ಲಿರುವ ತುಳಸಿ ಗಿಡವನ್ನು ಹೂವುಗಳನ್ನು, ಹಣ್ಣುಗಳನ್ನು ಮತ್ತು ಕೆಂಪು ಬಟ್ಟೆಗಳನ್ನು ಅರ್ಪಿಸುವ ಮೂಲಕ ಪೂಜಿಸಿ.

ಧೂಪ ಮತ್ತು ದೀಪಗಳನ್ನು ಬೆಳಗಿಸಿ. ಅದರ ಹತ್ತಿರ ಕುಳಿತು ತುಳಸಿ ಹಾರವನ್ನು ಕೈಯಲ್ಲಿ ಹಿಡಿದು ತುಳಸಿ ಗಾಯತ್ರಿ ಮಂತ್ರವನ್ನು 108 ಬಾರಿ ಪಠಿಸಿ ನಂತರ ತುಳಸಿಯನ್ನು ಮತ್ತೊಮ್ಮೆ ಪೂಜಿಸಿ.

ತುಳಸಿ ಬಳಿ ಸಂಜೆ ಮತ್ತೆ ದೀಪ ಬೆಳಗಬೇಕು. ಇದು ಯಾವಾಗಲೂ ಮನೆಯಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ.

----------------- Hari Om -----------------