Sunday, October 6, 2024

Navaratriya - Nava Durgas

 

ನವದುರ್ಗೆಯರಲ್ಲಿದೆ ನವಗ್ರಹ ಭಾವ -- Navaratriya - Nava 

Durgas

Navagraha Bhava is present in Navadurga devi's

 


 
                                                                 Nava Durga Devis

 

ನವರಾತ್ರಿಯ ಆಯಾ ದಿನಗಳಲ್ಲಿ ಆಯಾ ಬಣ್ಣದ ವಸ್ತ್ರವನ್ನು ಧರಿಸಿ ಆಯಾ ಗ್ರಹಕ್ಕೆ ಹಾಗೂ ಆಯಾದೇವಿಗೆ ತಕ್ಕಂತೆ ಆರಾಧನೆ ಮಾಡಿ ನೈವೇದ್ಯವನ್ನು ಇಡುವುದರಿಂದ ಜಗನ್ಮಾತೆಯ ಕೃಪೆ ಉಂಟಾಗುತ್ತದೆ.


ಶೈಲಪುತ್ರೀ:


ಶೈಲರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಸುಶೋಭಿತವಾಗಿದೆ.

ನವರಾತ್ರಿಯ ಮೊದಲನೇ ದಿನ ಇವಳ ಉಪಾಸನೆಯನ್ನು ಮಾಡಲಾಗುತ್ತದೆ. ಈ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸಿರುತ್ತಾರೆ. ಇಲ್ಲಿಂದಲೇ ಅವರ ಯೋಗಸಾಧನೆಯು ಪ್ರಾರಂಭವಾಗುತ್ತದೆ. ಅಂದಿನ ಗ್ರಹ - ಚಂದ್ರ, ನೈವೇದ್ಯ – ಮುದ್ಗಾನ್ನ.


ಬ್ರಹ್ಮಚಾರಿಣಿ:


ಬ್ರಹ್ಮ ಎಂದರೆ ತಪಸ್ಸು. ಬ್ರಹ್ಮಚಾರಿಣಿ ಎಂದರೆ ತಪಸ್ಸನ್ನು ಆಚರಿಸುವವಳು ಎಂದರ್ಥ. ಇವಳ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲ ಇರುತ್ತದೆ.


ದೇವಿ ಪಾರ್ವತಿಯು ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಬಹಳ ಕಠಿಣವಾದ ತಪಸ್ಸನ್ನು ಮಾಡಿದಳು. ಇಂತಹ ಕಠಿಣ ತಪಸ್ಸಿನ ಕಾರಣ ಇವಳನ್ನು ಬ್ರಹ್ಮಚಾರಿಣಿ ಎಂದು ಕರೆಯಲಾಯಿತು. ಬ್ರಹ್ಮಚಾರಿಣಿಯ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಇವುಗಳ ವೃದ್ಧಿ ಆಗುತ್ತದೆ. ಜೀವನದ ಕಠಿಣ ಸಂದರ್ಭದಲ್ಲಿಯೂ ಅವನ ಮನಸ್ಸು ಕರ್ತವ್ಯ ಪಥದಿಂದ ವಿಚಲಿತವಾಗುವುದಿಲ್ಲ.

ನವರಾತ್ರಿಯ ಎರಡನೆಯ ದಿನ ಇವಳ ಪೂಜೆಯಿಂದ ಸಾಧಕನ ಮನಸ್ಸು ಸ್ವಾಧಿಷ್ಠಾನ ಚಕ್ರದಲ್ಲಿ ಸ್ಥಿತವಾಗುತ್ತದೆ. ಅಂದಿನ ಗ್ರಹ - ಕುಜ, ನೈವೇದ್ಯ - ಮೊಸರನ್ನ.



ಚಂದ್ರಘಂಟಾ:


ನವರಾತ್ರಿಯ ಮೂರನೇ ದಿನ ಆರಾಧಿಸುವ ದುರ್ಗಿ ಚಂದ್ರಘಂಟಾ. ಮಹಾಗೌರಿ ಶಿವನನ್ನು ಮದುವೆಯಾದ ಮೇಲೆ ಅವಳ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನೆ. ಇದರಿಂದ ಈಕೆಯೇ ಚಂದ್ರಘಂಟಾ ದೇವಿಯಾಗುತ್ತಾಳೆ. ಈಕೆಯ ಶರೀರದ ಬಣ್ಣವು ಚಿನ್ನದಂತೆ ಹೊಳೆಯುತ್ತದೆ. ಈಕೆಯನ್ನು ಆರಾಧಿಸುವವರ ಮನಸ್ಸು ಮಣಿಪೂರ ಚಕ್ರದಲ್ಲಿ ಸ್ಥಿತವಾಗಿ ಸೌಮ್ಯತೆ, ವಿನಮ್ರತೆಗಳ ವಿಕಾಸವುಂಟಾಗಿ ಪರಾಕ್ರಮಿ ಹಾಗೂ ನಿರ್ಭಯರಾಗುವರು. ಅಂದಿನ ಗ್ರಹ - ಶುಕ್ರ, ನೈವೇದ್ಯ - ಸಿಹಿ ಪೊಂಗಲ್‌.



                                                                       another Picture

 

ಕೂಷ್ಮಾಂಡ:


'ಕು' ಎಂದರೆ ಸ್ವಲ್ಪ, ಉಷ್ಮ ಎಂದರೆ ಬಿಸಿ, ಅಂಡ ಎಂದರೆ ಅಂತರಿಕ್ಷೀಯ ಮೊಟ್ಟೆ. ಅಂದರೆ ಬ್ರಹ್ಮಾಂಡದ ಸೃಷ್ಟಿಕರ್ತಳು ಎಂದರ್ಥ. ಸೃಷ್ಟಿಯ ಮೊದಲಲ್ಲಿ ಎಲ್ಲೆಲ್ಲೂ ಕತ್ತಲಿದ್ದು ತಾಯಿಯು ಸೂರ್ಯ ಮಂಡಲದಲ್ಲಿದ್ದು ಎಲ್ಲೆಲ್ಲೂ ಬೆಳಕು ಹರಸಿದಳು.


ನವರಾತ್ರಿಯ ನಾಲ್ಕನೇ ದಿನ ಪೂಜಿಸಲ್ಪಡುವ ದೇವಿ ಕೂಷ್ಮಾಂಡ. ಅಷ್ಟಭುಜವನ್ನು ಹೊಂದಿದ್ದಾಳೆ. ಈಕೆಯ ಉಪಾಸನೆಯಿಂದ ಮನಸ್ಸು ಅನಾಹತ ಚಕ್ರದಲ್ಲಿ ನೆಲೆಸಿ, ಪೂಜಿಸಿದವರಿಗೆ ಶೋಕನಾಶ, ಆಯುರಾರೋಗ್ಯ, ಐಶ್ವರ್ಯಾದಿಗಳ ವೃದ್ಧಿ, ಯಶೋಕೀರ್ತಿಗಳ ಲಭ್ಯತೆ, ಪರಮಪದ ಪ್ರಾಪ್ತಿಯಾಗುತ್ತದೆ. ಅಂದಿನ ಗ್ರಹ - ರವಿ, ನೈವೇದ್ಯ – ಘೃತಾನ್ನ.


ಸ್ಕಂದಮಾತಾ:


ದೇವಿಯು ಕುಮಾರ ಕಾರ್ತಿಕೇಯನಿಗೆ ಜನ್ಮ ಕೊಟ್ಟಿದ್ದರಿಂದ ಸ್ಕಂದಮಾತಾ ಎಂಬ ಹೆಸರು ಬಂತು. ಸ್ಕಂದಮಾತೆಗೆ ನಾಲ್ಕು ಭುಜಗಳಿರುತ್ತವೆ. ಇವಳು ಬಲಗಡೆಯ ಮೇಲಿನ ಕೈಯಿಂದ ಸ್ಕಂದನನ್ನು ತೊಡೆಯಲ್ಲಿ ಹಿಡಿದಿರುವಳು. ಇವಳು ಸಿಂಹವಾಹಿನಿ.

ನವರಾತ್ರಿ ಐದನೆ ದಿನ ಪೂಜೆಗೊಳ್ಳುವ ಸ್ಕಂದಮಾತೆಯನ್ನು ಆರಾಧಿಸುವವರ ಮನಸ್ಸು ವಿಶುದ್ಧ ಚಕ್ರದಲ್ಲಿ ನೆಲೆಗೊಂಡು ಐಹಿಕ ಬಂಧನಗಳಿಂದ ಮುಕ್ತನಾಗುತ್ತಾನೆ. ಇವರಿಗೆ ಅಲೌಕಿಕ ತೇಜಸ್ಸು ಹಾಗೂ ಶಾಂತಿ ಲಭಿಸುವುದು. ಅಂದಿನ ಗ್ರಹ-ಬುಧ, ನೈವೇದ್ಯ- ಪಾಯಸಾನ್ನ.


ಕಾತ್ಯಾಯನಿ:


ಮಹರ್ಷಿ ಕಾತ್ಯಾಯನರು ಭಗವತಿ ಪರಾಂಬಿಕೆಯ ಉಪಾಸನೆ ಮಾಡುತ್ತಾ ಅನೇಕ ವರ್ಷಗಳವರೆಗೆ ಕಠಿಣ ತಪಸ್ಸನ್ನಾಚರಿಸಿದರು. ಅವರ ಪ್ರಾರ್ಥನೆಯಂತೆ ದೇವಿಯು ಕಾತ್ಯಾಯನಿಯಾಗಿ ಜನಿಸಿದಳು. ಸಿಂಹವಾಹಿನಿಯಾಗಿ ಬಂಗಾರ ವರ್ಣವನ್ನು ಹೊಂದಿದ

ಈಕೆಯನ್ನು ನವರಾತ್ರಿಯ ಆರನೇ ದಿನ ಪೂಜಿಸುತ್ತಾರೆ. ಅಂದು ಸಾಧಕನ ಮನಸ್ಸು ಆಜ್ಞಾಚಕ್ರದಲ್ಲಿ ನೆಲೆಗೊಳ್ಳುತ್ತದೆ. ಇದರಿಂದ ಚತುರ್ವಿಧ ಫಲಪುರುಷಾರ್ಥಗಳ ಪ್ರಾಪ್ತಿಯಾಗುವುದರೊಂದಿಗೆ ರೋಗ, ಶೋಕ, ಭಯ, ಸಂತಾಪ ದೂರಾಗುತ್ತವೆ ಹಾಗೂ ಪೂರ್ವಜನ್ಮಕೃತ ಪಾಪನಾಶವಾಗುತ್ತವೆ. ಅಂದಿನ ಗ್ರಹ-ಗುರು, ನೈವೇದ್ಯ- ಹುಗ್ಗಿ.


ಕಾಲರಾತ್ರಿ:


ತಾಯಿಯ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಪೂರ್ಣವಾಗಿ ಕಪ್ಪಾಗಿದೆ. ಈಕೆಯ ವಾಹನ ಗಾರ್ಧಭ. ರಕ್ತಬೀಜಾಸುರನನ್ನು ಕೊಲ್ಲುವ ಸಲುವಾಗೇ ಮಹಾಕಾಳಿಯ ರೂಪದಲ್ಲಿ ಅವತರಿಸುತ್ತಾಳೆ. ರಕ್ತಬೀಜಾಸುರನ ರಕ್ತ ಕೆಳಗೆ ಬೀಳದಂತೆ ಅದನ್ನು ಕುಡಿಯುತ್ತಿದ್ದ ತಾಯಿ ಮದದಿಂದ ನರ್ತಿಸುತ್ತಿರುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರವಷ್ಟೇ ಆಕೆಗೆ ಸಹಜ ಸ್ಥಿತಿಗೆ ಬರುವುದು.

ಈಕೆಯನ್ನು ನವರಾತ್ರಿಯ ಏಳನೇ ದಿನ ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳ ನಾಶವಾಗಿ ಪುಣ್ಯಲೋಕ ಪ್ರಾಪ್ತಿಯುಂಟಾಗುವುದು. ಯಾವ ರೀತಿಯ ಭಯವೂ ಆಗಲಾರದು. ಭೂತ, ಪ್ರೇತ, ಪಿಶಾಚಿಗಳೆಲ್ಲವೂ ಓಡಿಹೋಗುತ್ತವೆ. ಅಂದಿನ ಗ್ರಹ-ಶನಿ, ನೈವೇದ್ಯ- ಎಲ್ಲಾ ರೀತಿಯ ಅನ್ನ, ಎರಿಯಪ್ಪ.


ಮಹಾಗೌರಿ:


ಪಾರ್ವತಿಯು 8 ರಿಂದ 16ನೇ ವಯಸ್ಸಿನವಳಾಗಿದ್ದಾಗ ತುಂಬಾ ಸುಂದರಿಯೂ ಅತೀ ಗೌರವರ್ಣದವಳೂ ಆಗಿದ್ದಳು. ಶಿವನನ್ನು ಪತಿಯಾಗಿ ಪಡೆಯಲು ಘೋರ ತಪಸ್ಸನ್ನು ಆಚರಿಸಿದ ಕಾರಣ ಶರೀರ ಮಾಸುತ್ತದೆ. ಶಿವನ ಕೃಪೆಯಿಂದ ಸ್ವರ್ಣದಂತೆ ಗೌರವ ವರ್ಣವನ್ನು ಮರಳಿ ಪಡೆಯುತ್ತದೆ. ಸ್ವರ್ಣಗೌರಿಯಾಗುತ್ತಾಳೆ.


ನವರಾತ್ರಿಯ ಎಂಟನೇ ದಿನ ಮಹಾಗೌರಿಯನ್ನು ಆರಾಧಿಸುತ್ತಾರೆ. ಇವಳು ವೃಷಭವಾಹಿನಿ. ಈಕೆಯ ಉಪಾಸನೆಯಿಂದ ಸಾಧಕನ ಮನಸ್ಸು ಸಹಸ್ರಾರದ ಬ್ರಹ್ಮರಂಧ್ರದಲ್ಲಿ ನೆಲೆಸುತ್ತದೆ. ಸಹಸಾರ ಪದ್ಮದ ಸಾವಿರದಳಗಳ ಮಧ್ಯೆ ಸರ್ವವರ್ಣ ಶೋಭಿತಳಾದ ದೇವಿಯ ದರ್ಶನದಿಂದ ಸಾಧಕನು ಸರ್ವಬಂಧದ ವಿಮುಕ್ತಿ ಹೊಂದುತ್ತಾನೆ. ಅವನಿಗೆ ಹಿಂದಿನ ಜನ್ಮದ ಪಾಪಶಮನವಾಗಿ ಎಂದೆಂದಿಗೂ ದೈನ್ಯ, ದುಃಖ, ಪಾಪಗಳು ಸುಳಿಯದು. ಅಂದಿನ ಗ್ರಹ-ರಾಹು, ನೈವೇದ್ಯ- ಗುಡಾನ್ನ, ಆಂಬೊಡೆ.


ಸಿದ್ಧಿದಾತ್ರಿ:


ಸೃಷ್ಟಿಯ ಆರಂಭದಲ್ಲಿ ಮಹಾದೇವನು ಸೃಷ್ಟಿಯ ಕಾರ್ಯಕ್ಕಾಗಿ ಆದಿಶಕ್ತಿಯನ್ನು ಕುರಿತು ತಪಸ್ಸು ಮಾಡಿದನು. ಶಿವನ ತಪಸ್ಸಿಗೆ ಮೆಚ್ಚಿದ ಆದಿಶಕ್ತಿ ಸಿದ್ಧಿದಾತ್ರಿಯ ರೂಪದಲ್ಲಿಶಿವನ ವಾಮಭಾಗದಿಂದ ಅವಿರ್ಭವಿಸುತ್ತಾಳೆ. ಶಿವನು ಅರ್ಧನಾರೀಶ್ವರನೆಂದು ಹೆಸರಾಗುತ್ತಾನೆ. ಸಿದ್ಧಿದಾತ್ರಿ ಸಿಂಹವಾಹಿನಿ.


ನವರಾತ್ರಿಯ ಒಂಭತ್ತನೇ ದಿನ ಈಕೆಯನ್ನು ಆರಾಧಿಸುವುದರಿಂದ ಸಾಧಕರಿಗೆ ಎಲ್ಲಾ ಸಿದ್ಧಿಗಳು ಪ್ರಾಪ್ತವಾಗುತ್ತವೆ. ಅವನು ಭಗವತಿಯ ದಿವ್ಯಲೋಕಗಳಲ್ಲಿ ಸಂಚರಿಸುತ್ತಾ ಅವಳ ಕೃಪಾರಸವನ್ನು ನಿರಂತರವಾಗಿ ಪಾನಮಾಡುತ್ತಾ ಅವಳ ಪರಮ ಸಾನ್ನಿಧ್ಯವನ್ನು ಹೊಂದುತ್ತಾನೆ. ಅಂದಿನ ಗ್ರಹ-ಕೇತು, ನೈವೇದ್ಯ- ಶಾಲ್ಯಾನ್ನ.

ಈ ನವರಾತ್ರಿಯ 9 ದಿನಗಳು ಕೂಡ ದಿನನಿತ್ಯ ಲಲಿತಾ ಸಹಸ್ರನಾಮವನ್ನು ಪಠಿಸಿ (ಉಪದೇಶ ಆಗಿದ್ದರೆ ಮಾತ್ರ) ಜಗನ್ಮಾತೆಯ ಕೃಪೆಗೆ ಪಾತ್ರರಾಗೋಣ.

 

----- Hari Om -----

No comments:

Post a Comment