Tuesday, March 17, 2026

ಯುಗಾದಿ -- ಬೇವು-ಬೆಲ್ಲ-- Ugadi -- Neem-Jaggery

 


                Ugadi -- Neem-Jaggery   

 

 

ಯುಗಾದಿ -- ಬೇವು-ಬೆಲ್ಲ-- Ugadi -- Neem-Jaggery

  

ಯುಗಾದಿ ಅಂದರೆ ಹೊಸ ವರ್ಷದ ಮೊದಲ ದಿನ ಎಂದರ್ಥ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ ಯೋಜನೆಯನ್ನು ವಿಧಾಯ ಪೂರ್ವಕವಾಗಿ ಹಾಕಿಕೊಳ್ಳುವ ದಿನ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ, ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.

ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ‘ ಯುಗಾದಿ’ ಎಂಬ ಪದ ಬಂದಿದೆ,ಈ ಯುಗಾದಿ ಕೃತಯುಗದ ಚೈತ್ರ ಶುದ್ಧ ಪಾಡ್ಯ ತಿಥಿ ದಿನದಂದು ಪ್ರಾರಂಭವಾಯಿತು ಎಂಬ ಪ್ರತೀತಿ ಇದೆ. ಜೊತೆಗೆ ಬ್ರಹ್ಮ ದೇವನು ಆ ದಿನದಿಂದಲೇ ಸೃಷ್ಟಿಯ ಕಾರ್ಯ ಆರಂಭಿಸಿದನೆಂಬ ನಂಬಿಕೆಯೂ ಇದೆ. ಋತುಗಳು, ಗ್ರಹಗಳು, ನಕ್ಷತ್ರಗಳು ಈ ದಿನ ಸೃಷ್ಟಿ ಆಯಿತು ಎನ್ನುವ ನಂಬಿಕೆಯೂ ಇದೆ.

ಯುಗಾದಿ ಹಬ್ಬವನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಜನ ಚಂದ್ರಮಾನ ಮತ್ತು ಸೌರಮಾನ ಯುಗಾದಿ ಆಚರಿಸುತ್ತಾರೆ. ಹುಣ್ಣಿಮೆ ದಿನ ಚಂದ್ರನು ಯಾವ ನಕ್ಷತ್ರದಲ್ಲಿ ಇರುವನೋ ಆ ನಕ್ಷತ್ರದ ಹೆಸರಿನಿಂದ ಆ ಮಾಸ ಆರಂಭವಾಗುತ್ತದೆ.

ಈ ರೀತಿ ಚಂದ್ರನಿಂದಲೇ ಎಲ್ಲಾ ಲೆಕ್ಕಚಾರ ಮಾಡುವುದರಿಂದ ಈ ವರ್ಷದ ಮೊದಲ ದಿನವನ್ನು ಚಂದ್ರಮಾನ ಯುಗಾದಿ ಎಂದು ಕರೆಯಲಾಗುತ್ತದೆ. ಚಂದ್ರಮಾನ ಯುಗಾದಿಯನ್ನು ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ.

 

                                         
                                       
ಯುಗಾದಿ -- ಬೇವು-ಬೆಲ್ಲ

 

ಇತಿಹಾಸ:


ಯುಗಾದಿಯ ಚಂದ್ರಮಾನ ಪದ್ಧತಿಯ ಹೊಸ ವರ್ಷದ ಪ್ರಾರಂಭದ ದಿನ. ವರ್ಷದ ಫಸಲು ಕೈಗೆ ಬಂದು, ಆಗ ತಾನೇ ಸುಗ್ಗಿ ಮುಗಿದು ಹಿಗ್ಗಿನ ಬುಗ್ಗೆಯಾಗಿರುವ ಜನರಿಗೆ ‘ಉಂಡಿದ್ದೆ ಉಗಾದಿ ಮಿಂದಿದ್ದೆ ದೀಪಾವಳಿ’.

ಈ ಹಬ್ಬದ ಹಿರಿಮೆ-ಗರಿಮೆ ಮಹಿಮೆಗಳನ್ನು ಅಥರ್ವ ವೇದ, ಶತಪಥ ಬ್ರಾಹಣ, ಧರ್ಮಸಿಂಧು ಮುಂತಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಹಾಗೂ ಹಲವಾರು ಪುರಾಣಗಳಲ್ಲಿ ಹೇಳಲಾಗಿದೆ.

ಅಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ. ಈ ದಿನ ಶ್ರೀರಾಮ ರಾವಣನನ್ನು ಕೊಂದು ಅಯೋಧ್ಯೆಗೆ ಬಂದು, ರಾಮರಾಜ್ಯವಾಳಲು ಆರಂಭಿಸಿದ. ಅಯೋಧ್ಯೆಯ ಪ್ರಜೆಗಳು ಸಂತೋಷದಿಂದ ಮನೆಯ ಮುಂದೆ ವಿಜಯ ಪತಾಕೆಯನ್ನು ಹಾರಿಸಿದರು. ಇಂದಿಗೂ ಈ ಹಬ್ಬದ ದಿನ ಮನೆಯ ಮುಂದೆ ಬಾವುಟ ಹಾರಿಸಿ ನಲಿಯುವ ಪದ್ಧತಿ ಇದೆ. ಅದಕ್ಕಾಗಿಯೇ ಇದಕ್ಕೆ ಗುಡಿಪಾಡ್ಯ (ಗುಡಿ=ಬಾವುಟ) ಎನ್ನುತ್ತಾರೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಯುಗಾದಿಯನ್ನು ಗುಡಿಪಾಡ್ಯ ಹೆಸರಿನಲ್ಲಿ ಆಚರಿಸಲಾಗುತ್ತದೆ

ರೋಮನ್ನರಿಗೆ ಜನವರಿಯ ಮೊದಲ ದಿನವಿದ್ದಂತೆ, ಹಿಂದೂಗಳಿಗೆ ‘ಯುಗಾದಿ’ ಆದಿಯ ದಿನವಾಗಿದೆ. ಯುಗಾದಿಯ ಶಕ್ತಿ ಉಪವಾಸನೆಯ ಆರಂಭದ ದಿನವಾಗಿದ್ದು, ಈ ದಿನದಿಂದ ವಸಂತ ನವರಾತ್ರಿ ಆರಂಭವಾಗುತ್ತದೆ. ವರ್ಷಾಧಿಯ ವಸಂತ ಮತ್ತು ವರ್ಷಮಧ್ಯದ ಶರದೃತುಗಳ ಆರಂಭ ಕಾಲ ದೇವತಾನುಗ್ರಹ ಪ್ರಾಪ್ತಿಗೆ ಶ್ರೇಷ್ಠವೆಂದು ನಂಬಿಕೆ ಇದೆ. ಅಂದರೆ ಯುಗಾದಿಯ ದಿನ ಬೆಳಗ್ಗೆ ಎದ್ದು ಮನೆ ದೇವರನ್ನು ಸ್ಮರಿಸಿ, ಮಂಗಳ ಸ್ನಾನ ಮಾಡಿ, ನವವಸ್ತ್ರ ಧರಿಸಿ, ಹಿರಿಯರ ಆಶೀರ್ವಾದ ಪಡೆದು ಬೇವು-ಬೆಲ್ಲ ತಿನ್ನಲಾಗುತ್ತದೆ.

 

                                                                      Pic-1

 

 ಯುಗಾದಿಯ ವಿಶೇಷತೆ


ಈ ಹಬ್ಬದಂದು ಬೆಲ್ಲ ಮತ್ತು ಕಹಿಯಾದ ಬೇವು ಮಿಶ್ರಣವನ್ನು ಸೇವಿಸುವ ಆಚರಣೆ ಹಲವು ಕಡೆಗಳಲ್ಲಿ ಇದೆ. ಬೆಲ್ಲವನ್ನು ಎಲ್ಲರೂ ಸುಖಕರ, ಕಹಿ ಬೇವನ್ನು ದುಃಖಕರ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಜೀವನವು ಕ್ಷಣಕಾಲ ಉರಿದು ನಾಶವಾಗುವ ಮೇಣದ ಬತ್ತಿಯಲ್ಲ. ಸಂಪೂರ್ಣ ಸುಖ ಮತ್ತು ದು:ಖದ ನೆಲೆಯೂ ಅಲ್ಲ. ಪ್ರಕೃತಿಯ ಕತ್ತಲು-ಬೆಳಕಿನ ಚೆಲ್ಲಾಟದಂತೆಯೇ ಸುಖ-ದುಃಖ, ಶೀತ-ಉಷ್ಣ, ಲಾಭ-ನಷ್ಟಗಳಿಂದಲೂ ಬದುಕು ಕೂಡಿದೆ. ಇವುಗಳ ಸಂಕೇತವೇ ಬೇವು ಬೆಲ್ಲ.


ಖಣಿ ಇಡುವುದು

 

ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇಟ್ಟು, ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲ್ಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ
ಅಂದಿನ ವಿಶೇಷ.

                                                                         Pic-2

 

ವಿಶೇಷ ಆಹಾರ


ಒಬ್ಬಟ್ಟು ಅಥವಾ ಹೋಳಿಗೆ ಅಂದಿನ ವಿಶೇಷ ತಿನಿಸು.. ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರೀ ಬೇಳೆಯ ಹೂರಣದಲ್ಲಿ ಮಾಡುವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು.
ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನ ಕಾಯಿಯಿಂದ ಉಪ್ಪಿನ ಕಾಯಿಯನ್ನು ಮಾಡುವರು.

 

ಬೇವು-ಬೆಲ್ಲದ ವಿಶೇಷತೆ ಏನು?

 

"ಬೇವು-ಬೆಲ್ಲ ವೈದ್ಯಕೀಯ ಗುಣಗಳನ್ನು ಹೊಂದಿದೆ."
" ಬೇವಿನ ಎಲೆಗಳನ್ನು ಸೇವಿಸುವದರಿಂದ ಸರ್ವ ಅನಿಷ್ಟಗಳೂ ನಾಶವಾಗುತ್ತದೆ."
"ಮಾನವ ವಜ್ರದ್ರೇಹಿಯಾಗುತ್ತಾನೆ"
"ಸಂಪತ್ತು ಉಂಟಾಗುತ್ತದೆ."
" ಆಯಸ್ಸು ವೃದ್ಧಿಯಾಗುತ್ತದೆ ಎಂದು ಆಯುರ್ವೇದ ಹೇಳುತ್ತದೆ.


ಯುಗಾದಿ ಹಬ್ಬದಂದು ಬೇವು-ಬೆಲ್ಲ ಹಂಚುವುದರ ಹಿಂದಿನ ಆಧ್ಯಾತ್ಮಿಕ,

ವೈಜ್ಞಾನಿಕ ಮಹತ್ವವೇನು?

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ… ಮತ್ತೆ ಯುಗಾದಿ ಬಂದಿದೆ.. ಹೊಸ ಆರಂಭ, ಹೊಸ ವರ್ಷ, ಶುದ್ಧತೆ, ಹೊಸ ನಿರೀಕ್ಷೆ ಮತ್ತು ಸಮೃದ್ಧಿಯ ಸಂಕೇತವಾಗಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದೂಗಳ ಈ ಪವಿತ್ರ ಹಬ್ಬದ ದಿನ ದೇವರ ಪೂಜಾ ಕಾರ್ಯದ ಜೊತೆಗೆ ಮನೆಮಂದಿಯೆಲ್ಲಾ ಬೇವು ಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸ್ನೇಹಿತರು, ಸಂಬಂಧಿಕರಿಗೂ ಬೇವು-ಬೆಲ್ಲವನ್ನು ಹಂಚುತ್ತಾರೆ. ಹೌದು ಸಂಕ್ರಾಂತಿ ಹಬ್ಬದಂದು ಎಳ್ಳು ಬೆಲ್ಲ ಸವಿಯುವ ಹಾಗೆ ಯುಗಾದಿ ಹಬ್ಬದಂದು ಬೇವು ಬೆಲ್ಲ ಸೇವಿಸುವ ಆಚರಣೆ ರೂಢಿಯಲ್ಲಿದೆ. ಇದು ಕೇವಲ ಆಚರಣೆಯಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬೇವು-ಬೆಲ್ಲವನ್ನು ಸವಿಯುವುದರ ಹಿಂದಿರುವ ವೈಜ್ಞಾನಿಕ ಕಾರಣ ಇಲ್ಲಿದೆ.



ಬೇವು-ಬೆಲ್ಲದ ಆಧ್ಯಾತ್ಮಿಕ ಮಹತ್ವವೇನು?


ನೋವು-ನಲಿವನ್ನು ಸಂಕೇತಿಸುತ್ತದೆ: ಕಹಿ ಬೇವು ಮತ್ತು ಸಿಹಿ ಬೆಲ್ಲವು ಜೀವನದ ದ್ವಂದ್ವ ಸ್ವಭಾವವನ್ನು ಸಂಕೇತಿಸುತ್ತದೆ. ಸಂತೋಷ ಮತ್ತು ದುಃಖ, ಸವಾಲುಗಳು ಮತ್ತು ಯಶಸ್ಸು ಎಲ್ಲವನ್ನು ಬೇವು ಬೆಲ್ಲದಂತೆ ಸಮಾನವಾಗಿ ಸ್ವೀಕರಿಸಬೇಕು ಜೀವನವು ಕಹಿ ಮತ್ತು ಸಿಹಿ ಅನುಭವಗಳ ಮಿಶ್ರಣವಾಗಿದ್ದು, ಈ ಎರಡನ್ನೂ ಸಮಾನವಾಗಿ ಸ್ವೀಕರಿಸುವುದರಿಂದ ಜೀವನವು ಸಂತೋಷದಿಂದ ಸಾಗುತ್ತದೆ ಎಂಬುದನ್ನು ಸಂಕೇತಿಸುತ್ತದೆ.

ಶುಭ ಆರಂಭದ ಸಂಕೇತ: ಹಿಂದೂ ಸಂಪ್ರದಾಯದಲ್ಲಿ, ಬೇವನ್ನು ದೈವಿಕ ಗುಣಗಳನ್ನು ಹೊಂದಿರುವ ಪವಿತ್ರ ಮರವೆಂದು ಪರಿಗಣಿಸಲಾಗುತ್ತದೆ. ಇದನ್ನು ಬೆಲ್ಲದೊಂದಿಗೆ ಪ್ರಸಾದವಾಗಿ ಅರ್ಪಿಸುವುದು ಶುದ್ಧೀಕರಣ ಮತ್ತು ಹೊಸ ವರ್ಷದ ಆಶೀರ್ವಾದದ ಆರಂಭವನ್ನು ಸೂಚಿಸುತ್ತದೆ. ಇದು ನಕಾರಾತ್ಮಕತೆಯನ್ನು ಶುದ್ಧೀಕರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ, ಮುಂಬರುವ ವರ್ಷವನ್ನು ಸಮೃದ್ಧಗೊಳಿಸುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಹೊಸ ವರ್ಷವಾದ ಯುಗಾದಿ ಹಬ್ಬದ ದಿನ ಬೇವು ಬೆಲ್ಲವನ್ನು ಸ್ವೀಕರಿಸಲಾಗುತ್ತದೆ.



ಬೇವು ಬೆಲ್ಲದ ಸೇವನೆಯ ವೈಜ್ಞಾನಿಕ ಮಹತ್ವವೇನು?


ಯುಗಾದಿ ಹಬ್ಬದ ದಿನದಿಂದ ವಸಂತ ಕಾಲ ಆರಂಭವಾಗುತ್ತದೆ. ಈ ಸಮಯದಲ್ಲಿ ಸೂರ್ಯನ ಪ್ರಖರತೆ ಹೆಚ್ಚಾದಂತೆ ವಾತಾವರಣವು ಒಣಗಿ, ಬಿಸಿಲಿನಿಂದ ಕೂಡಿ, ಬೆಚ್ಚಗಾಗುತ್ತದೆ ಮತ್ತು ಸೂರ್ಯನ ಶಾಖದ ಪ್ರಭಾವದಿಂದಾಗಿ ದೇಹದಲ್ಲಿ ಪಿತ್ತರದ ಅಂಶವೂ ಹೆಚ್ಚಾಗುತ್ತದೆ. ಇದರಿಂದಾಗಿ ಹೊಟ್ಟೆ ಸಂಬಂಧಿ ಕಾಯಿಲೆಗಳು, ಬಾಯಿ ಹುಣ್ಣು, ವಾಂತಿ, ಎದೆಯುರಿ, ಅತಿಯಾದ ಬೆವರುವಿಕೆ, ತುರಿಕೆ ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗಳನ್ನು ತಡೆಗಟ್ಟಲು, ಅತಿಯಾದ ಪಿತ್ತರಸದ ಅಂಶವನ್ನು ಕಡಿಮೆ ಮಾಡಲು ಮತ್ತು ರೋಧನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನು ಸೇವನೆ ಮಾಡಲಾಗುತ್ತದೆ.



ಬೇವು-ಬೆಲ್ಲದ ಆರೋಗ್ಯ ಪ್ರಯೋಜನಗಳೇನು?

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಬೇವು-ಬೆಲ್ಲದ ಮಿಶ್ರಣವು ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ದೇಹವನ್ನು ತಂಪಾಗಿಸುತ್ತದೆ: ಕಹಿಯಾದ ಬೇವನ್ನು ಸಿಹಿಯಾದ ಬೆಲ್ಲದೊಂದಿಗೆ ಸೇವಿಸಿದಾಗ, ದೇಹದಲ್ಲಿನ ಪಿತ್ತರಸ ಅಂಶವು ಕಡಿಮೆಯಾಗುತ್ತದೆ ಮತ್ತು ಇದು ದೇಹವನ್ನು ತಂಪಾಗಿಸುತ್ತದೆ.

1) ಬೇವು ದೇಹವನ್ನು ನಿರ್ವಿಷಗೊಳಿಸುತ್ತದೆ: ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ವಿಷವನ್ನು ತೆಗೆದುಹಾಕುತ್ತದೆ, ಚರ್ಮ ಮತ್ತು ಜೀರ್ಣಕ್ರಿಯೆಯ ಆರೋಗ್ಯವನ್ನು ಉತ್ತೇಜಿಸುತ್ತದೆ.

2) ಬೇವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ: ಬೇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ.

3) ಬೆಲ್ಲ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಬೆಲ್ಲ ನೈಸರ್ಗಿಕ ಜೀರ್ಣಕಾರಿ ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ, ಆಮ್ಲೀಯತೆ ಮತ್ತು ಉಬ್ಬುವಿಕೆಯನ್ನು ತಡೆಯುತ್ತದೆ.

4) ಬೆಲ್ಲ ಕಬ್ಬಿಣದಿಂದ ಸಮೃದ್ಧವಾಗಿದೆ: ಇದು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

5) ಬೆಲ್ಲ ತ್ವರಿತ ಶಕ್ತಿಯನ್ನು ಒದಗಿಸುತ್ತದೆ: ಬೆಲ್ಲವು ನೈಸರ್ಗಿಕ ಶಕ್ತಿಯ ಮೂಲವಾಗಿದ್ದು, ಇದು ಬೇಸಿಗೆಯಲ್ಲಿ ದೇಹ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

6) ಗಾಯಗಳನ್ನು ಗುಣಪಡಿಸುತ್ತದೆ: ಬೇವು ಬೆಲ್ಲದ ಮಿಶ್ರಣವು ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವುದರಿಂದ, ಇದು ಗಾಯಗಳನ್ನು ಗುಣಪಡಿಸುತ್ತದೆ ಮತ್ತು ಅವುಗಳನ್ನು ಬೇಗನೆ ಗುಣಪಡಿಸುತ್ತದೆ.


-------------------- Hari Om --------------------


 


 

No comments:

Post a Comment