Friday, July 11, 2025

Guru Bhakthi

 

ಗುರುಭಕ್ತಿ ------ Guru Bhakthi or Guru Devotion

 


                                    Guru Bhakthi

  

ಉಪದೇಶದಿಂದ ಭಗವಂತನ ಸಾಕ್ಷಾತ್ಕಾರಕ್ಕೆ ಗುರುವಿನ ಕೃಪೆ ಬೇಕು


ಒಂದಾನೊಂದು ಕಾಲದಲ್ಲಿ ಒಬ್ಬ ಒಳ್ಳೆಯ ಸಂಸ್ಕಾರವುಳ್ಳ ವ್ಯಕ್ತಿ ಇದ್ದನು. ಆತನು ಪ್ರತಿನಿತ್ಯವೂ ಎಲ್ಲಾದರೂ ಹೋಗಿ ಧರ್ಮೋಪದೇಶವನ್ನು ಕೇಳುತ್ತಿದ್ದನು. ಆತನು ಈ ಉಪದೇಶದಿಂದ ಭಗವಂತನ ಸಾಕ್ಷಾತ್ಕಾರಕ್ಕೆ ಗುರುವಿನ ಕೃಪೆ ಬೇಕು ಎಂಬುದನ್ನು ತಿಳಿದುಕೊಂಡನು. ಇದನ್ನು ತಿಳಿದುಕೊಂಡಾಗಿನಿಂದ ತನಗೆ ಸೂಕ್ತ ಸಲಹೆ ಸಾಧನೆಯ ಮಾರ್ಗ ತೋರಿಸುವ ಒಬ್ಬ ಒಳ್ಳೆಯ ಗುರುವಿಗಾಗಿ ಹುಡುಕತೊಡಗಿದ. ಅವನು ಹುಡುಕಿದ ಗುರುಗಳಲ್ಲೆಲ್ಲ ಒಂದಲ್ಲ ಒಂದು ನ್ಯೂನ್ಯತೆಗಳು ಅವನಿಗೆ ಕಾಣುತ್ತಿತ್ತು. ಇದಕ್ಕೆ ಕಾರಣ ಅವನು ಬೇರೊಬ್ಬರ ತಪ್ಪುಗಳನ್ನು ಕಂಡು ಹಿಡಿಯುವುದರಲ್ಲಿ ಅವನ ಜಾಣತನವನ್ನು ಬಳಸುತ್ತಿದ್ದನು. ಆದುದರಿಂದ ಅವನಿಗೆ ಯಾವ ಗುರುವು ಸಿಗುತ್ತಿರಲಿಲ್ಲ.


ಆತನು ತನ್ನನ್ನು ತಾನೇ ಬುದ್ದಿವಂತ- ಮಹಾಜ್ಞಾನಿ ಎಂದು ತಿಳಿದುಕೊಂಡಿದ್ದನು. ಮಗುವಿನಂಥ ಮುಗ್ಧ ಮನಸ್ಸು ಇದ್ದರೆ ಭಗವಂತನು ಒಲಿಯುತ್ತಾನೆ ಎಂಬ ಅರಿವು ಆತನಿಗೆ ಇರಲಿಲ್ಲ.ಇದನ್ನೇ ಯೋಚಿಸುತ್ತಾ ಮನೆಯಲ್ಲಿ ಕುಳಿತಿರುವಾಗ ಆತನ ಪತ್ನಿಯೂ ನಿಮ್ಮ ಬೇಸರ ದುಃಖಗಳಿಗೆ ಕಾರಣವೇನು ಎಂದು ಕೇಳಿದಳು. ಕುಳಿತಿರುವಾಗ ಆತನ ಪತ್ನಿಯೂ ನಿಮ್ಮ ಬೇಸರ ದುಃಖಗಳಿಗೆ ಕಾರಣವೇನು ಎಂದು ಕೇಳಿದಳು. ಅದಕ್ಕೆ ಉತ್ತರವಾಗಿ ಆತನು ನನಗೆ ಆತ್ಮಸಾಕ್ಷಾತ್ಕಾರ ಪಡೆದುಕೊಳ್ಳಲು ಒಬ್ಬ ಗುರುವು ಬೇಕಾಗಿದ್ದಾನೆ. ಅಂತಹ ಗುರುವು ಇದುವರೆಗೂ ನನಗೆ ಸಿಗಲಿಲ್ಲ ಎಂದನು.


ಆತನ ಹೆಂಡತಿಯು ತುಂಬಾ ಜಾಣೆ ಒಂದು ಸೂಕ್ತ ದಾರಿಯನ್ನು ಹೇಳಿದಳು. ನೀವು ರಾತ್ರಿ ಕಾಡಿಗೆ ಹೋಗಿ ಕುಳಿತುಕೊಂಡಿರಿ. ಮೊದಲು ನಿಮ್ಮ ಕಣ್ಣಿಗೆ ಯಾವ ವ್ಯಕ್ತಿ ಕಾಣುತ್ತಾನೋ ಆತನನ್ನೇ ಗುರುವೆಂದು ಸ್ವೀಕರಿಸಿ ಎಂದಳು.ಮಾರನೆಯ ದಿನ ಇಬ್ಬರು ಕಾಡಿಗೆ ಹೋಗಿ ಒಂದು ಜಾಗದಲ್ಲಿ ಕುಳಿತುಕೊಂಡರು. ಆಗ ಅಲ್ಲಿಗೆ ದರೋಡೆ ಮಾಡಿಕೊಂಡು ಒಬ್ಬ ಕಳ್ಳನು ಬರುತ್ತಿದ್ದನು. ಗಂಡ-ಹೆಂಡತಿ ಇಬ್ಬರೂ ಹೋಗಿ ಆತನ ಪಾದಗಳನ್ನು ಗಟ್ಟಿಯಾಗಿ ಹಿಡಿದು ಇನ್ನು ಮುಂದೆ ನೀವು ನಮ್ಮ ಗುರುಗಳು ಎಂದರು. ನಮಗೆ ಗುರು ಮಂತ್ರವನ್ನು ಉಪದೇಶಿಸಿ ಎಂದು ಬೇಡಿಕೊಂಡರು. ಕಳ್ಳನು ಕ್ಷಣ ಗಾಬರಿಯಾದನು. ಆದರೆ ಆ ದಂಪತಿಗಳು ಅವನ ಮುಂದೆ ತಮ್ಮ ಕಥೆಯನ್ನೆಲ್ಲ ಹೇಳಿಕೊಂಡರು


                                                               Guru Raghavendra Swamy

 

ಕಳ್ಳನಿಗೂ ಮನಸ್ಸು ಕರಗಿ ತಾನು ಒಬ್ಬ ಕಳ್ಳನೆಂದು ಹೇಳಿದ. ಆದರೆ ಆ ಗಂಡ-ಹೆಂಡತಿ ಮಾತ್ರ ನೀನೇ ನಮಗೆ ಉಪದೇಶ ಮಾಡಬೇಕು ಎಂದು ಹಠ ಹಿಡಿದರು. ಕಳ್ಳನಿಗೆ ಅಲ್ಲಿಂದ ತಪ್ಪಿಸಿಕೊಂಡರೆ ಸಾಕಾಗಿತ್ತು. ಆತ ಒಂದು ಉಪಾಯ ಮಾಡಿದ. ನಾನು ಉಪ ದೇಶ ಮಾಡುತ್ತೇನೆ ನೀವು ತಲೆಬಾಗಿ ಕಣ್ಣು, ಕಿವಿ ಮುಚ್ಚಿಕೊಂಡು ಕುಳಿತಿರಬೇಕು ನಾನು ನಿಂತುಕೊಳ್ಳಿ ಎಂದು ಹೇಳುವವರೆಗೂ ಅದೇ ರೀತಿ ಕುಳಿತಿರಬೇಕು ಎಂದು ಹೇಳಿದನು.

 

ಅವರಿಬ್ಬರೂ ಆ ಕಳ್ಳನ ಮಾತಿನಂತೆ ತಲೆಬಗ್ಗಿಸಿ ಮಂಡಿಯೂರಿ ಕುಳಿತುಕೊಂಡರು. ಇಡೀ ದಿನ, ಮರುದಿನದವರೆಗೂ ಒಂದು ತೊಟ್ಟು ನೀರನ್ನಾಗಲೀ, ಆಹಾರವನ್ನಾಗಲಿ ಸೇವಿಸಲಿಲ್ಲ. ಕಳ್ಳನು ರಾಜ ಭಟರ ಕೈಗೆ ಸಿಕ್ಕನು. ಅವನನ್ನು. ಸೆರೆಯಲ್ಲಿಟ್ಟರು.ಭೂಲೋಕದಲ್ಲಿ ನಡೆಯುತ್ತಿರುವ ಈ ವಿಚಿತ್ರ ಸನ್ನಿವೇಶವನ್ನು ಮಹಾವಿಷ್ಣು ಮತ್ತು ಲಕ್ಷ್ಮಿ ಗಮನಿಸುತ್ತಿದ್ದು ಆ ಗಂಡ ಹೆಂಡತಿಯರ ಭಕ್ತಿಗೆ ಮೆಚ್ಚಿದರು.

 

ಆಗ ಲಕ್ಷ್ಮಿಯು "ಪಾಪ ಅವರಿಗೆ ಹೋಗಿ ದರ್ಶನ ಕೊಡಿ" ಎಂದು ವಿಷ್ಣುವಿನಲ್ಲಿ ಹೇಳಿದಳು. ವಿಷ್ಣು ಆ ದಂಪತಿಗಳ ಎದುರಿಗೆ ಪ್ರತ್ಯಕ್ಷನಾಗಿ ನಿಂತನು. ಗಂಡ ಹೆಂಡತಿಗೆ ಅಂತರಂಗದಿಂದ ವಿಷ್ಣುವಿನ ದರ್ಶನವಾದದ್ದು ತಿಳಿಯಿತು. ಮನಸ್ಸಿನಲ್ಲಿ ಸಂತೋಷಗೊಂಡರು. ಆದರೆ ಎದ್ದುನಿಂತು ಕೊಳ್ಳಲಿಲ್ಲ, ಕಣ್ಣನ್ನು ತೆರೆದು ನೋಡಲಿಲ್ಲ. ಇದನ್ನು ಗಮನಿಸಿದ ವಿಷ್ಣು ಎದ್ದು ನಿಲ್ಲುವಂತೆ ಹೇಳಿದ. ಆದರೆ ಅವರಿಬ್ಬರು ನಾವು ನಮ್ಮ ಗುರುಗಳ ಅಪ್ಪಣೆ ಇಲ್ಲದೆ ಏಳುವುದಿಲ್ಲ ಎಂದರು.ಈಗ ವಿಷ್ಣು ಆ ದೇಶದ ರಾಜನ ಕನಸಿನಲ್ಲಿ ಬಂದು ಆ ಕಳ್ಳನನ್ನು ಜೈಲಿನಿಂದ ಬಿಡುಗಡೆ ಮಾಡು ಎಂದು ಅಜ್ಞೆ ಮಾಡಿದನು. ರಾಜನು ಮೊದಮೊದಲು ಭ್ರಮೆ ಎಂದುಕೊಂಡನು. ಆದರೆ ಪದೇಪದೇ ಅದೇ ಕನಸು ಬೀಳಲು ಕಳ್ಳನನ್ನು ತಕ್ಷಣ ಬಿಡುಗಡೆ ಮಾಡಲು ಹೇಳಿದನು

 

                                                                             Pic -1

 
 

ಅದೇ ದಿನ ರಾತ್ರಿ ಕಳ್ಳನ ಕನಸಿನಲ್ಲೂ ವಿಷ್ಣು ಬಂದು ಆ ದಂಪತಿಗಳು ಇರುವ ಜಾಗಕ್ಕೆ ಹೋಗಿ ಅವರನ್ನು ಏಳಬೇಕೆಂದು ಹೇಳು ಎಂದು ಆಜ್ಞೆ ಮಾಡಿದನು. ಕಳ್ಳನು ಜೈಲಿನಿಂದ ಬಿಡುಗಡೆಯಾಗುತ್ತಲೇ ಹೆದರಿ ಕಾಡಿಗೆ ಓಡಿಹೋಗಿ ಆ ದಂಪತಿಗಳ ಕೈಹಿಡಿದು ಮೇಲೆಬ್ಬಿಸಿ ಕಣ್ಣು ಬಿಡುವಂತೆ ಬೇಡಿಕೊಂಡನು.


ಆನಂದದಿಂದ ಆ ದಂಪತಿಗಳು ಕಣ್ಣು ತೆರೆದರು. ಮೇಲಕ್ಕೆದ್ದು ಆತನಿಗೆ ವಂದಿಸುತ್ತ ಗುರುಗಳೆ ನಿಮ್ಮ ದಯದಿಂದ ನಮಗೆ ಭಗವಂತನು ಪ್ರತ್ಯಕ್ಷ ದರ್ಶನ ಕೊಟ್ಟನು ಎಂದು ಆತನಿಗೆ ಹೇಳಿದರು. ಕಳ್ಳನು ಕೂಡ ತನಗೆ ಬಿದ್ದ ಕನಸು, ಸೆರೆಮನೆಯಲ್ಲಿ ಇದ್ದುದು, ಬಿಡುಗಡೆಯಾದುದು ಎಲ್ಲವನ್ನು ಹೇಳಿದನು.


ಆಗ ಆಕಾಶವಾಣಿಯೊಂದು "ಭಕ್ತರೇ ನೀವು ನಿಮ್ಮ ಗುರುವಿನಲ್ಲಿ ಇರಿಸಿರುವ ಅನನ್ಯ ಭಕ್ತಿಗಾಗಿ ನಾನು ಸಂತುಷ್ಟನಾಗಿದ್ದೇನೆ. ಭಜನೆ ಮತ್ತು ಧ್ಯಾನವನ್ನು ಮಾಡುತ್ತೀರಿ. ಅತಿ ಶೀಘ್ರದಲ್ಲಿಯೇ ನಾನು ನಿಮಗೆ ಮತ್ತೆ ದರ್ಶನವಿತ್ತು ನಿಮ್ಮನ್ನು ಹುಟ್ಟು-ಸಾವಿನ ಬಂಧನದಿಂದ ಬಿಡುಗಡೆ ಮಾಡಿ ಮುಕ್ತಿಯನ್ನು ಕೊಡುತ್ತೇನೆ" ಎಂದು ನುಡಿಯಿತು.ಅಂದಿನಿಂದ ಕಳ್ಳನು ಕಳ್ಳತನವನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯುತ್ತ ವಿಷ್ಣುವಿನ ಭಕ್ತನಾದನು.


ಆ ದಂಪತಿಗಳು ಕೂಡ ಭಗವಂತನ ಭಜನೆ, ಚಿಂತನೆಗಳನ್ನು ಮಾಡುತ್ತಾ ಜೀವನ ಮುಕ್ತರಾಗಿ ಗುರು ಭಕ್ತಿಯಿಂದದೈವ ಸಾಕ್ಷಾತ್ಕಾರವನ್ನು ಹೊಂದಿದರು.

 

                                                                         Pic -2

ಗುರುಸ್ಥಾನವು" - ಅಲೌಕಿಕ ಶಕ್ತಿಗಳ ಅಪೂರ್ವ ಸಂಗಮ..!

1. "ಗುರು" ಎಂಬ ಪದವನ್ನು "ಅಪ್ರಮೇಯ", "ಅಗಣಿತ ಯೋಗ ಶಕ್ತಿ", "ಇಚ್ಛಾಶಕ್ತಿ", "ಜ್ಞಾನ ಶಕ್ತಿ" ಅಥವಾ "ಕ್ರಿಯಾಶೀಲ ಶಕ್ತಿ"ಗಳೆಂದು ವ್ಯಾಖ್ಯಾನಿಸಬಹುದು



2. ಆಧ್ಯಾತ್ಮಿಕ ದೃಷ್ಟಿಯಲ್ಲಿ ನೋಡಿದರೆ, "ಕತ್ತಲಿನ ಕೋಣೆಯಿಂದ ಬೆಳಕಿನ ಕೋಣೆಯಡಿ ಕರೆದೊಯ್ಯುವ ಅಥವಾ ಅರಿಷಡ್ವರ್ಗಗಳಿಗೆ ಮತ್ತು ನಾನಾ ಮೋಹಗಳಿಗೆ ಬಲಿಯಾಗದೇ ಸರಿಯಾದ ಮಾರ್ಗದರ್ಶನ ನೀಡುವವನನ್ನು ಗುರು ಎಂದು ಸಂಬೋಧಿಸಲಾಗುತ್ತದೆ". 



3. ಇಂತಹ ಮಾರ್ಗದರ್ಶಕರು ತನ್ನ ಬದುಕಿನಲ್ಲಿನ ಹೊಗಳಿಕೆಗಳಿಗೆ ಏರದೇ ಅಥವಾ ತೆಗಳಿಕೆಗಳಿಗೆ ಕುಗ್ಗದೇ ಬದುಕನ್ನು ಸಮಾನವಾಗಿ ಸ್ವೀಕರಿಸುವರು



4. "ಗುರು" ಎಂದರೆ, "ಅದೊಂದು ವಸ್ತುವಲ್ಲ". "ಯಾರೋ ಕೊಡುವ ಪದವಿಯೂ ಅಥವಾ ಸ್ಥಾನವೂ ಅಲ್ಲ". ಬದಲಾಗಿ "ಅದೊಂದು ಅಲೌಕಿಕ ಶಕ್ತಿಗಳ ಅಪೂರ್ವ ಸಂಗಮ". ಅಂದರೆ, "ಪ್ರಪಂಚದಾಚೆಗಿನ ಪರಮಾತ್ಮನೊಳಗಿನ ಜ್ಞಾನದ ಆನಂದ ಹುಡುಕುವಿಕೆ".


5. ಸಾಮಾನ್ಯವಾಗಿ "ಗುರು" ಎಂದು ಕರೆಯಲ್ಪಡುವಾತನು "ಮುಕ್ತಿಯ ಬಗೆಗಿನ ಪರಿಕಲ್ಪನೆ" ಹೊಂದಿರಬೇಕು. ಮಾತ್ರವಲ್ಲ, ಆಧ್ಯಾತ್ಮಿಕ, ಧಾರ್ಮಿಕ, ಸತ್ಸಂಗಗಳೊಳಗಿನ ಆದಷ್ಟು ವಿಚಾರಗಳನ್ನು ಸರಿಕಟ್ಟಾಗಿ ಅರಿತಿರಲು ಪ್ರಯತ್ನಿಸಬೇಕು



6. ಯಾವುದೇ ಅಹಂಕಾರವಿಲ್ಲದೇ ಜಗತ್ತಿನ ಸದುದ್ದೇಶದ ದೃಷ್ಟಿಯನ್ನಿಟ್ಟುಕೊಂಡು ತನ್ನೊಳಗಿನ ಜ್ಞಾನಶಕ್ತಿಯನ್ನು ಅನಾವರಣಗೊಳಿಸಲು ಮುಂದಾಗಬೇಕು. ಇಂತಹ ಗುರುಗಳು ಸರ್ವಶಕ್ತನೆಂದು ಭಾವಿಸಿರುವ ಮಾನವನಿಗಿಂತಲೂ ಬಲಾಢ್ಯನಾದ ಅತೀಂದ್ರೀಯ ಶಕ್ತಿಯನ್ನು ಹೊಂದಿರುವ ಇಡೀ ಬ್ರಹ್ಮಾಂಡದೊಳಗಿನ ಪರಮಾತ್ಮನ ಸಕಲ ಜ್ಞಾನವೆನಿಸಿದ ನಿರಾಕಾರ ತತ್ವದ ಮೂಲಗಳನ್ನು ಹಾಗೂ ಭಕ್ತಿ ಮಾರ್ಗದೊಳಗಿನ ಶಕ್ತಿಯನ್ನು ಪಡೆಯಲು ಮುಂದಾಗುವರು.


ಶ್ರೀಕೃಷ್ಣಾರ್ಪಣಮಸ್ತು.


------------------ Hari Om ------------------
 


 

 

 

No comments:

Post a Comment