Friday, January 30, 2026

ತ್ರಿರಂಗ ಆಂಜನೇಯರ ಪುಣ್ಯಕ್ಷೇತ್ರಗಳು.

 ತ್ರಿರಂಗ  ಆಂಜನೇಯರ ಪುಣ್ಯಕ್ಷೇತ್ರಗಳು.

 

                                                       ಆಂಜನೇಯ ಸ್ವಾಮಿ -- Lord Anjaneya

 

ಆಂಜನೇಯರ ಪುಣ್ಯಕ್ಷೇತ್ರಗಳು.

ಗೋಷ್ಪದೀಕೃತವಾರಾಶಿಂ  ಮಶಕೀಕೃತರಾಕ್ಷಸಂ !
ರಾಮಾಯಣ ಮಹಾಮಾಲರತ್ನಂ  ವಂದೇ ಲೀಲಾತ್ಮಜಂ !!

ತೀರ್ಥಕ್ಷೇತ್ರಗಳ ಯಾತ್ರೆ ಮಾಡಿ ಪುಣ್ಯ ಸಂಪಾದನೆ ಮಾಡಬೇಕೆಂಬ ಅಭಿ ಲಾಷೆ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ. ಹಾಗೆ,  ಅಧಿಕ ಮಾಸ, ಶ್ರಾವಣ ಮಾಸ ಹಾಗೂ ಕೆಲವು ವಿಶೇಷ ದಿನಗಳಲ್ಲಿ, ಸೂರ್ಯೋದಯ ದಿಂದ ಸೂರ್ಯಾಸ್ತ ದೊಳಗೆ  ಒಂದೇ ದೇವರ ಮೂರು ಕ್ಷೇತ್ರಗಳ ದರ್ಶನ ಮಾಡಿದರೆ ಕಾಶಿಯಾತ್ರೆಗೆ ಹೋದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಇತ್ತೀಚಿಗೆ ಹೆಚ್ಚು ಪ್ರಚಲಿತದಲ್ಲಿದೆ.

 

ಅವುಗಳಲ್ಲಿ  ವಿಷ್ಣುವಿನ ಅವತಾರ ಶ್ರೀರಂಗನಾಥನ ತ್ರಿರಂಗ ಕ್ಷೇತ್ರಗಳು ಅಂದರೆ  ಶ್ರೀರಂಗಪಟ್ಟಣದ ಆದಿರಂಗನಾಥ,  ಶಿವನಸಮುದ್ರದ ಮಧ್ಯರಂಗ ನಾಥ, ಮತ್ತು ತಮಿಳುನಾಡಿನ  ಶ್ರೀರಂಗಂ ನ  ಅಂತ್ಯರಂಗನಾಥ ಇವುಗಳು. ಹಾಗೆಯೇ, ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಘಾಟಿ, ಕುಕ್ಕೆ ,ಹಾಗೂ ನಾಗಲಮಡಿಕೆ ಸುಬ್ರಮಣ್ಯನ  ಒಂದೇ ದಿನ ದರ್ಶನ ಮಾಡಿದರೆ ಅದರಲ್ಲೂ ಅಧಿಕಮಾಸ ದಲ್ಲಿ  ದುಪ್ಪಟ್ಟು ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ.   ಹಾಗೆ  ಶ್ರೀರಾಮನ ಬಂಟ ಹನುಮನ ದೇಹದ ಮುಖ್ಯ ಭಾಗವಾದ,  ನೆತ್ತಿಯಲ್ಲಿ, ಕಣ್ಣಿನ ಭಾಗದಲ್ಲಿ ಮತ್ತು  ಮೂಗಿನಲ್ಲಿ ಸಾಲಿಗ್ರಾಮ ಜೋಡಿಸಿರುವ  ಕಾಂತೇಶ, ಬ್ರಾಂತೇಶ, ಹಾಗೂ ಶಾಂತೇಶ ಎಂಬ ಹೆಸರಿನಿಂದ ಕರೆಯಲ್ಪಡುವ  ಆಂಜನೇಯರ ದರ್ಶನ ಮಾಡಿದರೆ ಕಾಶಿಗೆ ಹೋದಷ್ಟೇ ಪುಣ್ಯ ಲಭಿಸುತ್ತದೆ  ಎಂಬುದು ಭಕ್ತರ ನಂಬಿಕೆಗೆ ಪೂರಕವಾಗಿದೆ

 

                                                            ಕಾಂತೇಶ / Lord  Kanthesa


ಕಾಂತೇಶ: ಈ ಆಂಜನೇಯ ಹಾವೇರಿ ತಾಲೂಕಿನ ಬ್ಯಾಡಗಿ ತಾಲೂಕಿನ 'ಕದರಮಂಡಲಗಿ' ಎಂಬ ಗ್ರಾಮದಲ್ಲಿ ಕಾಂತೇಶ ಎಂದು ಕರೆಯಲ್ಪಡುವ ಆಂಜನೇಯನ  ದೇವಸ್ಥಾನವಿದೆ. ಈ ಆಂಜನೇಯಗೆ ಎಲ್ಲಾ ಕಡೆಯಂತೆ  ಒಂದು ಬದಿಯಲ್ಲಿ ಮುಖ ಇರದೆ ನೇರವಾದ  ಮುಖವಿದ್ದು, ಸೂರ್ಯ ಸಾಲಿಗ್ರಾಮವನ್ನು ಎರಡೂ  ಕಣ್ಣಿನಲ್ಲಿ ಹೊಂದಿದ್ದಾನೆ. ಈ ಸಾಲಿಗ್ರಾಮದ ವಿಶೇಷ ಪ್ರಭೆ ಕಾಂತಿಯುತವಾದುದರಿಂದ  ಈ ಆಂಜನೇಯನನ್ನು 'ಕಾಂತೇಶ' ಎಂದು  ಕರೆಯುತ್ತಾರೆ.  ಭೀಮನ ಅವತಾರ ಎನ್ನಲಾಗಿದೆ. ಈ ಆಂಜನೇಯ ನನ್ನು  ದ್ವಾಪರಯುಗದಲ್ಲಿ  ಜನಮೇಜಯರಾಯನಿಂದ ಪ್ರತಿಷ್ಠಾಪಿಸಲಾಗಿದೆ.  ಈ ದೇಗುಲದಲ್ಲಿ ಕನಕದಾಸರು ತಮ್ಮ ಅಮೂಲ್ಯ ಕೃತಿಯಾದ ಮೋಹನ ತರಂಗಿಣಿಯನ್ನು ರಚನೆ ಮಾಡಿದರು

 

                                                              ಶಾಂತೇಶ / Lord Shanthesa


ಶಾಂತೇಶ: ಈ ಹೆಸರಿನ ಆಂಜನೇಯ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯಲ್ಲಿ ಇದೆ. ಶ್ರೀರಾಮಚಂದ್ರನಿಂದ ವರ ಪಡೆದು ಇಂದಿಗೂ ಭೂಮಿ ಮೇಲೆ ಭಕ್ತರನ್ನು ಕಾಪಾಡುತ್ತಿರುವ ಆಂಜನೇಯನ ನೆತ್ತಿಯ ಮೇಲೆ ಸಾಲಿಗ್ರಾಮವಿದೆ. ಇಲ್ಲಿನ ಆಂಜನೇಯನನ್ನು ವ್ಯಾಸರಾಯರ ಗುರುಗಳು ಬ್ರಾಹ್ಮಣ್ಯತೀರ್ಥರಿಂದ ಪ್ರತಿಷ್ಠಾಪಿಸಲಾಗಿದೆ ಎಂಬ  ಅಭಿಪ್ರಾಯ ವಿದೆ.‌ ಸ್ಥಳ ಪುರಾಣದ ಪ್ರಕಾರ ಬ್ರಾಹ್ಮಣ್ಯತೀರ್ಥರು ಸಾತೇನಹಳ್ಳಿಗೆ ಬಂದಾಗ  ಭೂಮಿಯಲ್ಲಿ ಹುದುಗಿದ ವಿಗ್ರಹದ  ಸೂಕ್ಷ್ಮತೆ ಗೋಚರವಾಗಿ ಭೂಮಿಯಿಂದ ತೆಗೆದು ಪ್ರತಿಷ್ಠಾಪನೆ ಮಾಡಿದರೆಂದು  ಹೇಳುತ್ತಾರೆ.  ಮದ್ವಾವತಾರದ ರೂಪ ಎನ್ನಲಾದ ಆಂಜನೇಯನ ನೆತ್ತಿಯ ಮೇಲೆ ಸಾಲಿಗ್ರಾಮ ಇರುವುದರಿಂದ ಇವನು ಶಾಂತ ಸ್ವರೂಪದವನು ಎನ್ನಲಾಗಿದೆ. ಈ ಕ್ಷೇತ್ರಕ್ಕೆ ಬಂದ ಭಕ್ತರ ಬೇಡಿಕೆಗಳು ಈಡೇರುತ್ತದೆ. ಶಕ್ತಿಶಾಲಿ ಆಂಜನೇಯ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಮಕ್ಕಳಿಲ್ಲದ ದಂಪತಿಗಳು ಕ್ಷೇತ್ರಕ್ಕೆ ಬಂದು  ಶ್ರದ್ಧಾ ಭಕ್ತಿ ಯಿಂದ ಆಂಜನೇಯನನ್ನು ಬೇಡಿಕೊಂಡು ಅವನ  ಕೃಪೆಗೆ ಪಾತ್ರರಾಗಿ ಮಕ್ಕಳನ್ನು ಪಡೆದಿದ್ದಾರೆ

 

ಆಶ್ವೀಜ ಮಾಸದ ಶ್ರವಣ( ವಿಜಯದಶಮಿ) ನಕ್ಷತ್ರದ ದಿನ ಗಿಡಮೂಲಿಕೆಗಳಿಂದ ವೈದ್ಯ ಪದ್ಧತಿಯಲ್ಲಿ ತಯಾರಿಸಿದ ಔಷಧಿಯನ್ನು  ಬಾಳೆಹಣ್ಣಿನ ಜೊತೆ ಪ್ರಸಾದದ ರೂಪದಲ್ಲಿ ಕೊಡುತ್ತಾರೆ. ಇದನ್ನು ಸೇವನೆ ಮಾಡಿದ ಅದೆಷ್ಟೋ ಮಹಿಳೆಯರು ಮಕ್ಕಳನ್ನು ಪಡೆದು ತೃಪ್ತಿಯ ನಗೆ ಬೀರಿದ್ದಾರೆ. ಇನ್ನೂ ಅನೇಕರು  ಪಂಚಮ ಶನಿ, ಸಾಡೇ ಸಾತಿಯಂಥ  ಶನಿ ಕಾಟ, ಗ್ರಹ ದೋಷ ಗಳಿಗೆ  ಪರಿಹಾರ ಪಡೆದಿದ್ದಾರೆ. ಇಲ್ಲಿಗೆ ಹರಕೆ ಹೊತ್ತು ಕೊಂಡವರು  ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಈ ದೇವಸ್ಥಾನದಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ದರ್ಶನ ಮಾಡುವ ಸೌಲಭ್ಯವಿದೆ

 

 

                                                 ಬ್ರಾಂತೇಶ / Lord Brahanthesa 

 

ಬ್ರಾಂತೇಶ: ಈ ಆಂಜನೇಯ ಶಿವಮೊಗ್ಗ  ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಇದೆ. ಸ್ಥಳ ಪುರಾಣದ ಪ್ರಕಾರ, ಹಿಂದೆ ಇದ್ದ ದೇವಸ್ಥಾನವನ್ನು ಕಿಡಿಗೇಡಿಗಳು ಕೆಡವಿ ಆಂಜನೇಯನನ್ನು ಅಲ್ಲಿರುವ ಕೆರೆಯಲ್ಲಿ ಹಾಕಿದ್ದರಂತೆ, ಆ ಊರಿನ ಪಾಳೇಗಾರನ ಕನಸಿನಲ್ಲಿ ಆಂಜನೇಯ ಸ್ವಾಮಿ  ಬಂದು ಕೆರೆಯಿಂದ ನನ್ನನ್ನು ಹೊರತೆಗೆದು ಗುರು ವ್ಯಾಸರಾಯರ ಮೂಲಕ ಪ್ರತಿಷ್ಠಾಪಿಸು ಎಂದು ಹೇಳಿ ದಂತಾಯಿತು. ಅದೇ ಪ್ರಕಾರ ಕೆರೆಯಿಂದ  ಆಂಜನೇಯನನ್ನು ತರುವಾಗ ಮೂಗಿನ ಬಳಿ ಸ್ವಲ್ಪ ಭಿನ್ನವಾಯಿತು. ಭಿನ್ನ ವಿಗ್ರಹವನ್ನು ಪ್ರತಿಷ್ಠಾಪಿಸುವುದಿಲ್ಲ ಎಂದು ಹೇಳಿದ ಗುರುಗಳ ಸ್ವಪ್ನದಲ್ಲಿ ಆಂಜನೇಯನೇ ಬಂದು ಕೃಷ್ಣಾ ನದಿ ಯಲ್ಲಿ ಮುಳುಗು ಹಾಕಿದರೆ ಒಂದು ಸಾಲಿಗ್ರಾಮ ಸಿಗುತ್ತದೆ ಅದನ್ನು ಮೂಗಿನ ಭಾಗಕ್ಕೆ ಸೇರಿಸಿ ಪ್ರತಿಷ್ಠಾಪಿಸು ಎಂದನಂತೆ. ಸ್ವಪ್ನದಲ್ಲಿ  ತಿಳಿಸಿದಂತೆ ಕೃಷ್ಣಾ ನದಿಯಿಂದ  ತಂದ ಸಾಲಿಗ್ರಾಮವನ್ನು ಹನುಮಂತನ ಮೂಗಿಗೆ  ಜೋಡಿಸಿ  ಪ್ರತಿಷ್ಠಾಪಿಸಿದರು  ಎಂಬುದು  ದಂತಕಥೆ. 

 

ಈ ದೇವಸ್ಥಾನದಲ್ಲಿ ಪ್ರಮುಖ ದೇವರು ಹುಚ್ಚರಾಯಸ್ವಾಮಿಯಾಗಿದ್ದು, ಈ ಹೆಸರು ಬರಲು ಕಾರಣವೂ ಇದೆ.ಗಣಪತಿ ಹಾಗೂ ಸೀತಾರಾಮಾಂಜನೇಯ ವಿಗ್ರಹವು ಪ್ರತಿಷ್ಠಾಪಿಸಲ್ಪಟ್ಟಿದೆ.  ದೇವಸ್ಥಾನದ ಹತ್ತಿರವಿರುವ ದೊಡ್ಡ ಕೆರೆಯಲ್ಲಿ ಕಲ್ಲಿನ ದೋಣಿಯಲ್ಲಿ ಆಂಜನೇಯ  ವಿರಾಜಮಾನನಾಗಿದ್ದ. ಆ ದೋಣಿಯನ್ನು ದೇವಸ್ಥಾನದ ಹೊರಪ್ರಕಾರದಲ್ಲಿ ಇಟ್ಟಿದ್ದರು. ಆಂಜನೇಯನನ್ನು ಪ್ರತಿಷ್ಠಾಪನೆ ಮಾಡಿದ ಜಾಗ ವೀರಶೈವ ಜಂಗಮನಾದ ಹುಚ್ಚಪ್ಪ ಎಂಬುವನದು ಅವನಲ್ಲಿ ಜಾಗ ಕೇಳಿದಾಗ ನನ್ನ ಹೆಸರು ಇಟ್ಟರೆ ಕೊಡುತ್ತೇನೆ ಎಂಬ ಅಭಿಮತದಂತೆ  ಆಂಜನೇಯನಿಗೆ  'ಹುಚ್ಚರಾಯಸ್ವಾಮಿ' ಎಂದು  ಹೆಸರಿಟ್ಟರು. 

ಮುಖ್ಯ ದೇವರಾದ ಹುಚ್ಚರಾಯಸ್ವಾಮಿ, ಹಾಗೂ ಗಣಪತಿ, ಸೀತಾರಾಮಾಂಜನೇಯ  ವಿಗ್ರಹವನ್ನು  ಪ್ರತಿಷ್ಠಾಪಿಸಿದ್ದು  ನಿತ್ಯ ಪೂಜೆ ಅರ್ಚನೆ, ವಿಶೇಷ ದಿನಗಳಲ್ಲಿ ಪೂಜೆ, ಹೋಮ ಹವನ ಭಜನೆ, ಅನ್ನ ಸಂತರ್ಪಣೆ, ಹಾಗೂ ಹರಿಕಥೆ, ಪ್ರವಚನ,  ಎಲ್ಲವನ್ನು ನಡೆಸಲಾಗುತ್ತಿದೆ. ಶಿಕಾರಿಪುರದಲ್ಲಿ  ಹುಚ್ಚರಾಯಸ್ವಾಮಿ ದೇವಸ್ಥಾನ ಪ್ರಸಿದ್ಧಿ ಪಡೆದಿದೆ.  ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಜಾತ್ರೆ ನಡೆಯುತ್ತದೆ.

(ಯಾವುದೋ ಒಂದು ಮಾಸದಲ್ಲಿ ಇದೇ ದೇವಾಲಯದಲ್ಲಿ 15 ದಿನಗಳ ಕಾಲ ಮಹಿಳೆಯರು ಮಕ್ಕಳು ಸೇರಿ, ಭಜನೆ ಹಾಡು ಎಲ್ಲ ಹೇಳಿ ಹುಣ್ಣಿಮೆ ದಿನ ರಾಮ ಸೀತೆ ಅಥವಾ ಈಶ್ವರ ಪಾರ್ವತಿಯರಂತೆ ಮಕ್ಕಳಿಗೆ ಅಲಂಕರಿಸಿ ಕೂರಿಸುತ್ತಾರೆ. ಎಲ್ಲರ ಮನೆಯಿಂದಲೂ ವಿಧವಿಧವಾದ ತಿಂಡಿ ತಿನಿಸುಗಳನ್ನು ತಂದಿರುತ್ತಾರೆ. ಹಾಡು, ಭಜನೆ, ಒಗಟು, ಆಟ, ಮನರಂಜನೆ ಯಾಡಿ ತಂದಿರುವ ತಿಂಡಿಗಳನ್ನು ಮೊದಲು ಅಲಂಕರಿಸಿದ ಮಕ್ಕಳಿಗೆ ಬಡಿಸುತ್ತಾರೆ ನಂತರ ಎಲ್ಲರ ಎಲೆಗೂ ಅದನ್ನು ಬಡಿಸುತ್ತಾರೆ ಒಂದಾಗಿ ಕುಳಿತು ಹರಟುತ್ತಾ ಸಂತೋಷವಾಗಿ  ತಿಂದು ಮನೆಗೆ ಹೋಗುವುದು.  ನಾನು ಶಿಕಾರಿ ಪುರದಲ್ಲಿ ಎಂಟನೇ ತರಗತಿ ಓದಿದ್ದೆ ಆಗ ನೋಡಿದ್ದೆ ಯಾವ ಆಚರಣೆ ಎಂದು ನೆನಪಿಲ್ಲ)

  ಊರಿನ ಹೆಸರು ಮೊದಲು ಬೇರೆ ಇತ್ತು.  ಇಲ್ಲಿ ತುಂಬಾ ಕಾಡು ಪ್ರಾಣಿಗಳು ಹುಲಿ, ಸಿಂಹ, ಚಿರತೆ, ಕಿರುಬ, ಜಿಂಕೆ, ಅನೇಕ ಪ್ರಾಣಿಗಳು ಶಿಖಾರಿಗೆ ಸಿಗುತ್ತದೆ ಎಂದು ಕೆಳದಿ ಅರಸರು  ಶಿಕಾರಿಮಾಡಲು ಬರುತ್ತಿದ್ದರು. ಈ ಕಾರಣದಿಂದ ಶಿಕಾರಿಪುರ ಎಂದು ಹೆಸರು ಬಂದಿತು ಎಂಬುದು ಇತಿಹಾಸ.  ದೇವಸ್ಥಾನದ ಹತ್ತಿರವೇ ಕೆರೆ ಇದೆ ದೊಡ್ಡ ಕೆರೆ ಎಂದು ಕರೆಯುತ್ತಾರೆ. ಕೆರೆ ದಾಟಿ ಸ್ವಲ್ಪ ಮುಂದೆ ಹೋದರೆ ದತ್ತಾಶ್ರಮವಿದೆ. ಇಲ್ಲಿ ಶಾರದಾಂಬೆ ಮತ್ತು ಶಂಕರಾ ಚಾರ್ಯರು  ಹಾಗೂ ಅಮೃತಶಿಲೆಯ ದತ್ತಾತ್ರೇಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪೂಜೆ ಭಜನೆ ಪ್ರವಚನ ಎಲ್ಲ ಇರುತ್ತದೆ

 

                                                   ತ್ರಿರಂಗ ಆಂಜನೇಯರು--ALL

  

ಶಿಕಾರಿಪುರಕ್ಕೆ ಸಮೀಪದಲ್ಲಿ  ಹೊಯ್ಸಳರ ಆಳ್ವಿಕೆಯಲ್ಲಿದ್ದ ಬಳ್ಳಿಗಾವಿ ಗ್ರಾಮವಿದ್ದು ಗತಕಾಲದ ವೈಭವ ತಿಳಿಸುತ್ತದೆ. ನಾಟ್ಯರಾಣಿ ಶಾಂತಲೆಯ ತವರೂರು ಆಗಿದೆ. ಇಲ್ಲೊಂದು ಈಶ್ವರ ಲಿಂಗ ವಿದ್ದು, ದಿನದ ತ್ರಿಕಾಲದಲ್ಲಿ ಮೂರು ಬಣ್ಣದಲ್ಲಿ ಬದಲಾಗುತ್ತದೆ. ಉಡಗಣಿ ಅಥವಾ ಉಡತಡಿ ಗ್ರಾಮ ಸಮೀಪವೆ ಇದ್ದು ಇಲ್ಲಿ ಪ್ರಸಿದ್ಧವಾದ  ರಾಘವೇಂದ್ರ ಸ್ವಾಮಿಗಳ ಮಠವಿದೆ. ರಾಯರನ್ನು ಬೇಡಿಕೊಂಡರೆ  ಎಂತಹ ಕಷ್ಟಗಳು ಪರಿಹಾರವಾಗುತ್ತದೆ ಎಂದು ಬೇರೆ ಬೇರೆ ಕಡೆಯಿಂದಲೂ ಭಕ್ತರು ಬಂದು ಸೇವೆ ಸಲ್ಲಿಸುತ್ತಾರೆ.  ಹಾಗೂ ಈ ಊರಿನಲ್ಲಿ ವೀರಶೈವರ ಚೆನ್ನಮಲ್ಲಿಕಾರ್ಜುನರ ದೇವಸ್ಥಾನ ಮತ್ತು ಮಠ ಇದೆ. ಶಿವಶರಣೆ ಅಕ್ಕಮಹಾದೇವಿಯ ಜನ್ಮಸ್ಥಳ ಇದಾಗಿದ್ದು ಅಕ್ಕಮಹಾದೇವಿಯ ಒಂದು ದೇವಸ್ಥಾನವಿದೆ.


ಬ್ರಿಟಿಷರು ನಮ್ಮ ದೇಶ ಆಕ್ರಮಿಸಿಕೊಂಡಾಗ ಸ್ವಾತಂತ್ರ್ಯ ಹೋರಾಟದ ಕಹಳೆಯೂದಿ ರೈತರು ಹೋರಾಟ ಮಾಡಿ ವೀರ ಮರಣವನ್ನಪ್ಪಿದ  'ಈಸೂರು' ಸಮೀಪದಲ್ಲಿದೆ.  ಹರಿಹರ, ದಾವಣಗೆರೆ ಸಮೀಪದಲ್ಲಿದ್ದು ಹೋಟೆಲ್ಗಳಲ್ಲಿ ದಾವಣಗೆರೆ ಬೆಣ್ಣೆಯಿಂದ ತಯಾರಿಸಿದ ರುಚಿಕರ ತಿಂಡಿಗಳು ದೊರೆಯುತ್ತದೆ. ಇಲ್ಲಿ ಕುಮದ್ವತಿ ನದಿ ಹರಿಯುತ್ತಿದ್ದು ಮಳೆಗಾಲದಲ್ಲಿ ಪ್ರವಾಹದ ವೈಭವ ನೋಡಲು ಖುಷಿಯಾಗುತ್ತದೆ. ಶಿಕಾರಿಪುರ, ಶಿರಾಳಕೊಪ್ಪ, ಆಯನೂರಿನ  'ಸಂತೆ' ಹೆಸರುವಾಸಿ. "ಬಾರೆ ಸಂತೆಗೆ ಹೋಗೋಣ ಸಿನಿಮಾ ಟೆಂಟಲ್ಲಿ ಕೋರೋಣ"  ಎಂಬಂತೆ ಆಗ ಸಿನಿಮಾ ಟಾಕೀಸ್,  ಹೋಟೆಲ್ಲು ಎಲ್ಲವೂ ತುಂಬಾ ಚೆನ್ನಾಗಿತ್ತು. ಸಾಗರ, ಸೊರಬ, ರಿಪ್ಪನ್ ಪೇಟೆ, ಈ ಕಡೆಗೆ ಕುಂಸಿ, ಚೋರ್ಡಿ, ಶಿಕಾರಿಪುರಕ್ಕೆ  ಸಮೀಪದಲ್ಲಿದೆ. ಶಿಕಾರಿಪುರ ಭತ್ತದ ಕಣಜ ಎಂದು ಪ್ರಸಿದ್ಧವಾಗಿದೆ. ಇತ್ತ ಮಲೆನಾಡು ಅಲ್ಲದ ಅತ್ತ ಬಯಲು ಸೀಮೆಯು ಅಲ್ಲದ 'ಶಿಕಾರಿಪುರ' ಮನಮೋಹಕವಾದ ಸುಂದರವಾದ  ಹುಚ್ರಾಯಸ್ವಾಮಿಯ ಪುಣ್ಯಕ್ಷೇತ್ರ. ಈ ಕಥೆ ಬರೆಯುತ್ತಾ, ನನಗೆ ಮತ್ತೊಮ್ಮೆ ಶಿಕಾರಿಪುರಕ್ಕೆ ಹೋಗಿ ಬಂದಂತೆ ಆಯಿತು.

ಅಂಜನಾ ನಂದನಂ ವೀರಂ, ಜಾನಕಿ ಶೋಕ ನಾಶನಂ!
ಕಪೀಶಮಕ್ಷ ಹಂತಾರಂ ವಂದೇ ಲಂಕಾ ಭಯಂಕರಂ !!
ಮಹಾ ವ್ಯಾಕರಣಾಂಭೋಧಿ, ಮಂತ ಮಾನಸಮಂದರಂ
ಕವಯಂತಂ ರಾಮಕೀರ್ತ್ಯಾ ಹನುಮಂತಮುಪಾಸ್ಮಹೇ !!

 

-------------- Hari Om -----------------