Tuesday, January 13, 2026

ಮಕರಸಂಕ್ರಾಂತಿ -- Makara Sankranti

 

ಮಕರಸಂಕ್ರಾಂತಿ -- Makara Sankranti

 


                              Makara Sankranti

 

ಭೂಲೋಕದ ಪ್ರತ್ಯಕ್ಷ ದೇವರು ಎಂದರೆ ಸೂರ್ಯ ಭಗವಾನ್. ಈತನನ್ನು ಜಾತಿ, ಮತ ಭೇದವಿಲ್ಲದೆ ಪ್ರಪಂಚದ ಎಲ್ಲ ಜನರು ಆರಾಧಿಸುತ್ತಾರೆ. ಸೂರ್ಯ ನಮಗೆ ಬೆಳಕು ನೀಡುವುದಲ್ಲದೆ ಬದುಕನ್ನು ನೀಡುವನು ಹಾಗೂ ಈ ಜಗತ್ತಿನ ಅಂಧಕಾರವನ್ನು ಹೋಗಲಾಡಿಸುವನು. ಈತನು ಜ್ಞಾನದ ಸಂಕೇತವಾಗಿದ್ದಾನೆ. ಭಾಸ್ಕರ ಇಲ್ಲದೆ ಇದ್ದರೆ ಜಗತ್ತಿನ ಸಕಲ ಚಟುವಟಿಕೆಗಳು ನಿಂತು ಹೋಗುತ್ತದೆ.

ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.

ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.

ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆಯಿದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಗೀತೆಯಲ್ಲಿ ಆಯಣದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವನು. ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮ ಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಳ್ಳುತ್ತಾನೆ.

ಕೃತಯುಗದಲ್ಲಿ ಶಿವ ಮತ್ತು ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದಲ್ಲಿ, ಬ್ರಹ್ಮ ದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಇಂದ್ರನಿಗೆ ಗೌತಮರು ಶಾಪ ವಿಮೋಚನೆ ಮಾಡಿದ್ದು, ನಾರಾಯಣನು ವರಹಾ ಅವತಾರದಿಂದ ಭೂಮಿಯ ಮೇಲೆ ಪಾದ ಸ್ಪರ್ಶ ಮಾಡಿದ್ದು, ಸಮುದ್ರ ಮಂಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಹಾಗೂ ಋಷಿ ಮುನಿಗಳು ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದು ಸಹ ಈ ಉತ್ತರಾಯಣದಲ್ಲಿ. ಈ ಎಲ್ಲ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ, ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಮಾಡುತ್ತಾರೆ.



                                                                      Yellu & Bella

 

ಸಂಕ್ರಾಂತಿ ಹಬ್ಬ


ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ.

ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ. ಜನಪದ ಗೀತೆಯಲ್ಲೂ ಸಂಕ್ರಾಂತಿಯ ಬಗ್ಗೆ ಹೇಳಿದೆ. ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣದ ಕಾಲದ ಗೋಧೂಳಿ ಲಗ್ನಕ್ಕಿಂತ ಹೆಚ್ಚು ಸಮಯ ಈ ಭೂಲೋಕದಲ್ಲಿರುತ್ತಾರೆ ಎಂದು ಪುರಾಣದಲ್ಲಿ ಇದೆ. ಈ ಪುಣ್ಯ ದಿನದಲ್ಲಿ ಹಲವಾರು ದೇವತೆಗಳಿಗೆ ಶಾಪ ವಿಮೋಚನೆ ಉಂಟಾಗಿದೆ. ಉದಾಹರಣೆಗೆ ಇಂದ್ರ ಮತ್ತು ಚಿತ್ರಸೇನ.

ಪ್ರತಿ ವರ್ಷ ಸಂಕ್ರಾಂತಿಯ ಹಬ್ಬದ ದಿನ ಗ್ರಾಮೀಣ ಪ್ರದೇಶದಲ್ಲಿ ರೈತರು ಆ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸುತ್ತಾರೆ


ಏನೇ ವೈಮನಸ್ಸು ಇದ್ದರೂ ಮರೆತು ಒಂದಾಗಿ ಬಾಳೋಣವೆಂದು ಶಪಥ ತೊಟ್ಟು ಹೊಸ ಪಥದಲ್ಲಿ ಸಾಗುವುದಕ್ಕೆ ಮುನ್ನುಡಿ ಇಡುವ ಹಬ್ಬ ಸಂಕ್ರಾಂತಿ. ಪ್ರತ್ಯಕ್ಷ ಭಗವಾನ್ ಸೂರ್ಯದೇವೇ ರಾಶಿಗತಿಯನ್ನು ಬದಲಿಸಿ ಜನಜೀವನ ರೀತಿ ನಿರ್ದೇಶಿಸುವ ಶುಭಗಳಿಗೆ.ಇದರಿಂದ ಹಗಲು ಹೆಚ್ಚಾಗಿ ಕತ್ತಲಿನ ಸಮಯ ಕಡಿಮೆ. ಕಾಡುವ ಹೇಮಂತ ಶಿಶಿರವ ಹಿಂದಿಕ್ಕಲು ಪ್ರಬಲವಾಗುತ್ತ ವಸುಂಧರೆಗೆ ಪ್ರಿಯನಾದ ಚೈತ್ರನನ್ನು ಕರೆತರಲು ಉದ್ಯುಕ್ತನಾಗುತ್ತಾನೆ ಸೂರ್ಯ. ಕೊಯ್ಲಿಗೆ ಸಿದ್ಧವಾದ ಪೈರಿನ ಕೆಲವು ತೆನೆಗಳನ್ನು ಸಾಂಕೇತಿಕವಾಗಿ ಕೊಯ್ದು ತಂದು ಕೆಲವು ಕಾಳುಗಳನ್ನು ಹಾಕಿ ಪಾಯಸ ಮಾಡಿದರೆ ಉಪಯೋಗಿಸುವ ಮುನ್ನ ಧಾನ್ಯ ಪೂಜೆ ನಡೆದಂತೆ ಎನ್ನುವ ನಂಬಿಕೆ.

 

ಪ್ರಕೃತಿಯಲ್ಲಿ ದೊರೆಯುವ ಸಂಪತ್ತು ವಿಶೇಷಗಳನ್ನು ಉಪಯೋಗಿಸಿಕೊಂಡು ನಮ್ಮ ಬದುಕನ್ನು ಸೂಕ್ತ ರೀತಿಯಲ್ಲಿ ತಿದ್ದಿಕೊಳ್ಳುವುದೇ ಹಬ್ಬಗಳ ಪರಮಾರ್ಥ.ಮಕರ ಸಂಕ್ರಾಂತಿ ಸೌರಮಾನದ ಹಬ್ಬ. ಧಾರ್ಮಿಕ ಮಹತ್ವದ ಉತ್ತರಾಯಣ ಪ್ರಾರಂಭ ದೇವತೆಗಳಿಗೆ ಅತ್ಯಂತ ಪ್ರಿಯವಾದ ಕಾಲ. ಮಂಗಳ ಕಾರ್ಯಗಳನ್ನು ಮಾಡಲು ಪ್ರಶಸ್ತ. ಪವಿತ್ರ ನದಿಗಳಲ್ಲಿ ಸ್ನಾನ ಅತಿ ಪುಣ್ಯಕರ. ಮುಂದಿನ ಆರು ಮಾಸಗಳು ಸ್ವರ್ಗದ ಬಾಗಿಲು ತೆರೆದಿರುವುದೆಂಬ ಅಮೋಘ ನಂಬಿಕೆ. ಈ ಕಾಲದಲ್ಲಿ ದೇಹತ್ಯಾಗ ಮಾಡಿದವರಿಗೆ ಮೋಕ್ಷಪ್ರಾಪ್ತಿ ಎನ್ನುವ ಅಚಲ ವಿಶ್ವಾಸ ಹಲವರದು. ದೈಹಿಕ ದೋಷಗಳೊಡನೆ ಮಾನಸಿಕ ದೋಷ ನಿವಾರಿಸುವ ಪರ್ವಸಮಯ. ರೈತರಿಗೆ ಶ್ರೇಷ್ಠವಾದ ದಿನ, ಗೋವುಗಳನ್ನು ಸಿಂಗರಿಸಿ ಪೂಜಿಸುತ್ತಾರೆ. ಕೊಂಬುಗಳು ದಕ್ಷಿಣಾಯನ ಮತ್ತು ಉತ್ತರಾಯಣಗಳ ಸಂಕೇತ. ಅಯನ ದೇವತೆಗಳ ವಾಸಸ್ಥಾನ. ಅವೆರಡರ ಸಂಧಿ ಕಾಲದ ಸೂಚನೆಯ ಪ್ರತೀಕ.

 


                                                           Sweet Huggi or Pongal

  

ಸಂಕ್ರಾಂತಿ ಸುಗ್ಗಿ ಹಬ್ಬ. ಸೂರ್ಯನ ಪಥ ಬದಲಾವಣೆಯಷ್ಟೇ ಅಲ್ಲ. ವರ್ಷಪೂರ್ತಿ ಮೈಮುರಿದು ದುಡಿದ ರೈತನ ಮೊಗದಲ್ಲಿ ಮಂದಹಾಸ ಮೂಡುವ ಸಡಗರದ ಸಂದರ್ಭ. ಆದರೆ ಹಿಂದಿನಂತೆ ಸಂಭ್ರಮದ ಬದಲಾಗಿ ಇಳಿಮುಖವಾಗಿರುವ ಇಳುವರಿ ವಿಷಾದ ಉಣಿಸುತ್ತಿದೆ. ಇದಕ್ಕೆ ಕಾರಣ ಅತಿವೃಷ್ಠಿ ಅನಾವೃಷ್ಠಿ ಒಂದು ಕಾರಣವಾದರೆ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಸಲು ಸರ್ಕಾರಗಳು ಹೆಚ್ಚು ಆಸಕ್ತಿ ವಹಿಸಿದ್ದರಿಂದ ಸಂಕ್ರಾಂತಿ ಸವಕಲಾಗುತ್ತಿದೆ ; ಅರ್ಥಹೀನವಾಗುತ್ತಿದೆ. ಸಂಕ್ರಾಂತಿ ಸಂಸ್ಕೃತಿ ಮಕರ ಸಂಕ್ರಾಂತಿ ದಿನದಿಂದ ಉತ್ತರಾಯಣವು ಆರಂಭವಾಗುವುದರಿಂದ ದಕ್ಷಿಣಾಯಣದಲ್ಲಿ ಹೆಚ್ಚಿಗೆ ವಿಸರ್ಜಿಸಲ್ಪಟ್ಟಿರುವ ಶರೀರದ ಉಷ್ಣದ ಕೊರತೆಯನ್ನು ನಿವಾರಿಸಲು ಉಷ್ಣ ಪದಾರ್ಥಗಳನ್ನು ತೆಗೆದುಕೊಳ್ಳಬೇಕಾದುದರಿಂದ ಎಳ್ಳು ಸೇವಿಸೆಂದು ಹಿರಿಯರು ಹೇಳಿದರು. ವೈದ್ಯ ಶಾಸ್ತ್ರ ಮತ್ತು ಆಹಾರ ಶಾಸ್ತ್ರ ಪ್ರಕಾರ ಚರ್ಮ, ನೇತ್ರ ಮತ್ತು ಎಲುಬು ಇವುಗಳ ಬೆಳವಣಿಗೆಗೆ ಮತ್ತು ಇವುಗಳು ಸರಿಯಾದ ಸ್ಥಿತಿಯಲ್ಲಿರುವುದಕ್ಕೆ "" ಮತ್ತು "ಬಿ" ಅನ್ನಾಂಗಗಳು ಅತ್ಯವಶ್ಯಕ. ತೈಲ ಧಾನ್ಯವಾದ ಎಳ್ಳಿನಲ್ಲಿ ಈ ಅನ್ನಾಂಗಗಳು ಬೇಜಾನ್ ಇವೆ.



ಸಾಮಾನ್ಯವಾಗಿ ಎಳ್ಳನ್ನು ಅಶುಭ ಕಾರ್ಯಗಳಲ್ಲಿ ಮಾತ್ರ ಉಪಯೋಗಿಸುವ ವಾಡಿಕೆಯಿದೆ. ಆರೋಗ್ಯ ದೃಷ್ಠಿಯಿಂದಲೂ ಇದನ್ನು ನೇರವಾಗಿ ಉಪಯೋಗಿಸಕೂಡದು. ನಾವು ಸೇವನೆ ಮಾಡುವ ಆಹಾರ ಮತ್ತು ತಿಂಡಿಗಳಲ್ಲಿ ಇದನ್ನು ಸೇರಿಸಿ ತಯಾರು ಮಾಡಲಾಗುತ್ತದೆ. "ತಿಲ"ದಿಂದ "ತೈಲ" ಅಡಿಗೆಗೆ, ದೇವರ ದೀಪಕ್ಕೆ ಬಳಸುವುದುತ್ತಮವೆಂದರು. ನವಗ್ರಹಗಳಿಗೆ ಹೇಳಿದ ನವಧಾನ್ಯಗಳಲ್ಲಿ ಎಳ್ಳು ಒಂದು. ಶನಿಗ್ರಹಕ್ಕೆ ಹೇಳಿರುವುದು ಎಳ್ಳು. ನವಧಾನ್ಯಗಳಲ್ಲಿ ಎಳ್ಳು ಮಾತ್ರ ತೈಲ ಧಾನ್ಯ. ಉಳಿದ ಎಂಟು ಧಾನ್ಯಗಳಲ್ಲಿ ಯಾವುವೂ ತೈಲ ಧಾನ್ಯಗಳಲ್ಲ. ಕೇವಲ ಎಳ್ಳನ್ನು ತಿಂದರೆ ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಪಿತ್ತ ಹೆಚ್ಚಾಗುತ್ತದೆ.


ಆದ್ದರಿಂದ ಪಿತ್ತಹರವಾದ ಬೆಲ್ಲವನ್ನು ಜೊತೆಯಲ್ಲಿ ತೆಗೆದುಕೊಂಡರೆ ಶರೀರದಲ್ಲಿ ಕೊರತೆ ಉಂಟಾಗಿರುವ ಕೊಬ್ಬಿನ ಅಂಶವು ಸರಿದೂಗಿಸಲ್ಪಡುತ್ತದೆ. ಬೆಲ್ಲವೂ ಪಿತ್ತಗುಣವುಳ್ಳದ್ದಾದರೂ ಎಳ್ಳಿನ ಜೊತೆ ಸೇರಿದಾಗ ಪಿತ್ತ ಶಮನವಾಗಿ ಸ್ಥಿಮಿತಕ್ಕೆ ಸಹಾಯವಾಗುತ್ತದೆ. "ಉಷ್ಣೇನ ಉಷ್ಣಂ ಶೀತಲಂ" ಎನ್ನುವಂತೆ ಪಿತ್ತವನ್ನು ಪಿತ್ತದಿಂದ ನಾಶ ಮಾಡುವುದೇ ಎಳ್ಳು ಬೆಲ್ಲ. ಹಸಿ ಎಳ್ಳಿನಲ್ಲಿರುವ ದೋಷಗಳನ್ನು ನಿವಾರಣೆ ಮಾಡುವ ಉದ್ದೇಶದಿಂದ ಹುರಿದ ಎಳ್ಳನ್ನು ಸೇವಿಸಬೇಕು. ಇದರ ಜೊತೆಗೆ ರುಚಿಗೋಸ್ಕರ ಮತ್ತು ಕೊಬ್ಬಿನ ಅಂಶವಿರುವ ಕಡಲೆಕಾಯಿ ಬೀಜ, ಕೊಬ್ಬರಿ ಇತ್ಯಾದಿಗಳನ್ನು ಬೆರೆಸಿ ತಿನ್ನುವಂತೆ ಏರ್ಪಾಡು ಮಾಡಿದ್ದಾರೆ. ಆಗಲಿ ಎಳ್ಳು ಬೆಲ್ಲದ ಹಬ್ಬ.

 


                                                                        another Pic


ಮಕರ ಸಂಕ್ರಾಂತಿ ಹೊಸ ಆಶೆಗಳ ಸಂಕೇತ.”

  1. ಈ ಹಬ್ಬ ಕೃತಜ್ಞತೆಯ ಮಹತ್ವವನ್ನು ತಿಳಿಸುತ್ತದೆ.”

  2. ಸೂರ್ಯನಂತೆ ನಿಮ್ಮ ಜೀವನ ಪ್ರಕಾಶಮಾನವಾಗಲಿ.”

  3. ಮಕರ ಸಂಕ್ರಾಂತಿ ಸಂತೋಷದ ಹಬ್ಬ.”

  4. ಹೊಸ ಆರಂಭಗಳ ಹಬ್ಬ.”


ಶ್ರೀಕೃಷ್ಣಾರ್ಪಣಮಸ್ತು.


---------- Hari Om ---------

 


No comments:

Post a Comment