ಶ್ರೀ
ಮಧ್ವಾಚಾರ್ಯರು
- ಶ್ರೀ ಗುರುಭ್ಯೋ ನಮಃ ಹರಿಃ ಓಂ
"ವ್ಯಾಸಾಯ ಭವ ನಾಶಾಯ ಶ್ರೀಶಾಯ ಗುಣ ರಾಶಯೇ
ಹೃದ್ಯಾಯ ಶುದ್ಧ ವಿದ್ಯಾಯ ಮಧವಾಯಚ ನಮೋ ನಮಃ "
"ಆಚಾರ್ಯಃ ಪವನೋ ಅಸ್ಮಾಕಂ ಆಚಾರ್ಯಣೀಚ ಭಾರತೀ
ದೇವೋ ನಾರಾಯಣಃ ಶ್ರೀಶಃ ದೇವಿ ಮಂಗಲದೇವತಾ "
"ಮೂಕೋ ಅಪಿ ಯತ್ಪ್ರಸಾದೇನ ಮುಕುಂದ ಶಯನಾಯತೆ
ರಾಜ ರಾಜಯತೆ ರಿಕ್ತೋ ರಾಘವೇಂದ್ರಮ್ ತಮ್ ಆಶ್ರಯೇತ್"
***
ನಮ್ಮ ಈ ಪವಿತ್ರವಾದ ಭಾರತ ದೇಶದಲ್ಲಿ ಮನುಷ್ಯನ ಆಧ್ಯಾತ್ಮಿಕ ಪ್ರಗತಿಯನ್ನು ಉನ್ನತಿಯೊಂದಿಗೆ ಸಾಧಿಸಿ ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದು ಹೇಗೆ ಎಂದು ಇಡೀ ಪ್ರಪಂಚಕ್ಕೆ ಹೇಳಿ, ಪ್ರತಿಪಾದಿಸಿ, ತೋರಿಸಿ ಮತ್ತು ಅನುಷ್ಠಾನದಿಂದ ನಡೆದುಕೊಂಡವರು ಆಚರ್ಯತ್ರಯರಲ್ಲಿ ಶ್ರೇಷ್ಠರಾದ ಜಗದ್ಗುರುಗಳಾದ ಸಾಕ್ಷಾತ್ ವಾಯುದೇವರ ಅವತಾರವಾದ ಶ್ರೀ ಮನ್ಮಧ್ವಾಚಾರ್ಯರು.
ಶ್ರೀ ಮಧ್ವಾಚಾರ್ಯರು ಈಗಣ ಉಡುಪಿ ಜಿಲ್ಲೆಯ ಪಾಜಕ ಎಂಬ ಗ್ರಾಮದ ನಡಿಲ್ಲಾಯ ಮನೆತನದಲ್ಲಿ ಮಧ್ಯಗೇಹ ಮತ್ತು ವೇದವತಿ ಎಂಬ ಸತ್ ಸಂಪ್ರದಾಯಸ್ಥ ಬ್ರಾಹ್ಮಣ ದಂಪತಿಗಳಿಗೆ ವಿಜಯ ದಶಮಿ ಸೆಪ್ಟೆಂಬರ್ ೧೯, ಕ್ರಿ.ಶ. ೧೨೦೦ ರಂದು ಜನಿಸಿ ಅವರ ಸ್ವರೋಪೋದ್ಧಾರ ಮಾಡಿದರು. ಇವರ ಕಾಲಮಾನ ಕ್ರಿ.ಶ. ೧೨೦೦ ರಿಂದ ೧೨೮೦ ಎಂಬುದು ಪಂಡಿತ ನಾರಾಯಣ ತೀರ್ಥರು ರಚಿಸಿದ ಸುಮಧ್ವ ವಿಜಯ ಎಂಬ ಗ್ರಂಥದಿಂದ ತಿಳಿದು ಬರುತ್ತದೆ. ಇವರ ಜನ್ಮ ತಿಥಿಯನ್ನು 'ಮಧ್ವ ನವಮಿ' ಎಂದು ಮಾಧ್ವರು ಆಚರಿಸುವ ಸಂಪ್ರದಾಯವು ಇಂದಿಗೂ ಬೆಳೆದು ಬಂದಿದೆ.
ಆಚಾರ್ಯರು ತಮ್ಮ ಬಾಲ್ಯದಲ್ಲಿಯೇ ಅನೇಕ ಮಹಿಮೆಗಳನ್ನು ತೋರಿದವರು. ಅವರು ಬಾಲ್ಯಾವಸ್ಥೆಯಲ್ಲಿದ್ದಾಗ ಒಮ್ಮೆ ಅವರ ತಾಯಿ ಮನೆಯಲ್ಲಿ ಇವರನ್ನು ಬಿಟ್ಟು ತಮ್ಮ ಹಿರಿಯ ಮಗಳಿಗೆ ಕೂಸನ್ನು ನೋಡಿಕೊಳ್ಳಲು ಹೇಳಿ ಹೊರಗಡೆ ಕೆಲಸದ ನಿಮಿತ್ಯ ಹೋಗಿದ್ದರು. ಆಗ ಈ ಬಾಲಕನಿಗೆ ಹಸಿವಾಗತೊಡಗಿತು ತದ ಕಾರಣ ಜೋರಾಗಿ ಅಳಲು ಪ್ರಾರಂಭಿಸಿತು. ಅಲ್ಲಿಯೇ ಇದ್ದ ಅವರ ಅಕ್ಕನಿಗೆ ಏನು ತೋಚದೆ ಆಕಳಿಗೆ ಇಟ್ಟಿದ್ದ ಬಹಳಷ್ಟು ಹುರಳಿಯನ್ನು ತಿನ್ನಿಸಿದಳು. ಸ್ವಲ್ಪ ಸಮಯದ ನಂತರ ಅವರ ತಾಯಿ ಬಂದು ವಿಚಾರಿಸಲಾಗಿ ನಡೆದ ಸುದ್ದಿಯನ್ನು ಹೇಳಿದಳು. ಅವರು ಗಾಬರಿಯಾಗಿ ಕೂಡಲೇ ವೈದ್ಯರೆಡೆಗೆ ಕರೆದುಕೊಂದು ಹೋದಾಗ ಏನೂ ಆಗಿಲ್ಲ ಎಂದು ಹೇಳಿದರು. ಆಚಾರ್ಯರಿಗೆ ಅಂಗುಷ್ಠ ಮಾತ್ರ ಜೀರ್ಣ ಶಕ್ತಿ ಇದ್ದುದರಿಂದ ಈ ರೀತಿಯಾಗಿ ಅಪಾರ ಮಹಿಮೆಗಳನ್ನು ತೋರಿದರು. ಸ್ವತಃ ವಾಯದೇವರ ಅವತಾರವಾದ ಆಚಾರ್ಯರಿಗೆ ಇವ್ಯಾವುದು ಮಹತ್ವದ ಸಂಗತಿಯೇ ಅಲ್ಲ. ಈ ಮಹಿಮೆಗಳನ್ನು ತೋರಿದ ಇವರಿಗೆ ವೇದಗಳು 'ಪಿತುಮಾನ್' ಎಂದು ಕರೆದಿವೆ.
ಆಚಾರ್ಯರ ಪೂರ್ವಾಶ್ರಮದ ಹೆಸರು ವಾಸುದೇವ ಎಂದು. ಅವರ ಗುರುಗಳಾದ ಅಚ್ಯುತ ಪ್ರಜ್ಞರು ಅವರಿಗೆ ಹನ್ನೊಂದನೇ ವಯಸ್ಸಿನಲ್ಲಿ ಪರಮಹಂಸ ಸನ್ಯಾಸಾಶ್ರಮವನ್ನು ನೀಡಿ ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು.
ಒಮ್ಮೆ ಅಚ್ಯುತ ಪ್ರಜ್ಞರು ಮಧ್ವರಿಗೆ ಮತ್ತು ಇನ್ನುಳಿದ ಶಿಷ್ಯವೃಂದಕ್ಕೆ ಪಾಠ ಮಾಡುತ್ತಿರುವಾಗ ಭಾಗವತದ ಒಂದು ಶ್ಲೋಕವನ್ನು ತಪ್ಪಾಗಿ ಅರ್ಥೈಸಿದರು ಮತ್ತು ಅದು ಸರಿಯೆಂದು ಹೇಳಿದರು ಆಗ ಅಲ್ಲಿಯೇ ಇದ್ದ ಮದಾಚಾರ್ಯರು ಅವರ ತಪ್ಪುಗಳನ್ನು ಎತ್ತಿ ಹಿಡಿದು ತೋರಿಸಿ ಒಂದೊಂದೇ ಅರ್ಥ ಹೇಳತೊಡಗಿದರು. ಪ್ರತಿ ಪದದ ಅರ್ಥವನ್ನು ಯಥಾವತ್ತಾಗಿ ಮೂಲ ಅರ್ಥಕ್ಕೆ ಚ್ಯುತಿ ಬಾರದಂತೆ ಹೇಳಿದರು.
ಅಂದೇ ಕೊನೆ ಯಾಯಿತು ಅವರ ಗುರುಗಳ ಪಾಠ. ಹೀಗೆ ಅವರ ಒಂದು ವಿದ್ವತ್ತಿನ ಪ್ರವಾಹವು ಹರಿದು ಸಜ್ಜನರ ಒಡಲನ್ನು ತುಂಬತೊಡಗಿತು.
ಅವರು ಸಾರಿದ ಪ್ರಮುಖ ತತ್ವ ವೆಂದರೆ "ಹರಿ ಸರ್ವೋತ್ತಮತ್ವ ವಾಯು ಜೀವೋತ್ತಮತ್ವ". ಕುದಿಪುಸ್ತೂರವನೆಂಬ ದುರ್ವಾದಿಯನ್ನು ಸೋಲಿಸಿ ಮೆರೆದ ತತ್ವವೇ ಈ ಅವಳಿ ತತ್ವಗಳು. ಇವರ ಮೊದಲ ಶಾಸ್ತ್ರ ಕೃತಿ "ಗೀತಾ ಭಾಷ್ಯ". ಶ್ರೀ ಮನ್ನಾರಯಣನ ಆದೇಶದ ಮೇರೆಗೆ ಬ್ರಹ್ಮ ಸೂತ್ರ ಭಾಷ್ಯಗಳನು ರಚಿಸಿದರು. ಆದರೆ ಇದರ ಲಿಪಿಕಾರರು ಶ್ರೀ ಸತ್ಯತೀರ್ಥರು.
ಹೀಗೆಯೇ ಅವರು ಮೂವತ್ತೆರಡು ಶ್ಲೋಕಗಳನ್ನು ಒಳಗೊಂಡ ಅಣು ಭಾಷ್ಯವನ್ನು ರಚಿಸಿ ತಮ್ಮ ಗುರುಗಳಾದ ಅಚ್ಯುತ ಪ್ರಜ್ನರಿಗೆ ಕಾಣಿಕೆಯಾಗಿ ನೀಡಿದರು. ಇದನ್ನು ರಚಿಸಿದ್ದಕ್ಕಾಗಿ "ಅಭಿನವ ವೇದವ್ಯಾಸ" ಎಂಬ ಬಿರುದು ಇವರನ್ನು ಅರಸಿ ಬಂದಿತು. ಪದ್ಮ ಪುರಾಣದಲ್ಲಿ ತಿಳಿಸಿರುವಂತೆ ತಪ್ತ ಮುದ್ರ ಧಾರಣದ ಅವಶ್ಯಕತೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಸದಾಚಾರದಿಂದ ಹೇಗೆ ಜೀವನವನ್ನು ನಡೆಸಬೇಕು ಎಂಬುದರ ಬಗ್ಗೆ "ಸದಾಚಾರ ಸ್ಮೃತಿ " ಎನ್ನುವ ಗ್ರಂಥವನ್ನು ರಚಿಸಿದರು.
ಶ್ರೀ ಮಧ್ವರು ಬರುವುದಕ್ಕಿಂತ ಪೂರ್ವದಲ್ಲಿ ತತ್ವಂ ಅಸಿ ಎಂಬುದೇ ಧ್ಯೇಯ ಸಿದ್ಧಾಂತ ಆಗಿತ್ತು. ವೇದಗಳು ಅಪ್ರಮಾಣ ಎಂದು ನಂಬಲಾಗಿತ್ತು. ಇದನ್ನು ವಿರೋಧಿಸಿದವರು ಪ್ರಥಮವಾಗಿ ಶ್ರೀ ರಾಮಾನುಜಾಚಾರ್ಯರೇ ಆದರೂ ಅವರಿಗೆ ಈ ಅವಳಿತತ್ವಗಳ ಸಾರವೇ ಹೊಳೆಯಲಿಲ್ಲ. ತದ ನಂತರ ಇದನ್ನು ವಿರೋಧಿಸಿದ್ದಲ್ಲದೆ ಸಮರ್ಥವಾಗಿ ತತ್ವವಾದವನ್ನು ಮಂಡಿಸಿದವರು ಜಗದ್ಗುರು ಮಧ್ವಾಚಾರ್ಯರು. ಹರಿ ಸರ್ವೋತ್ತಮನೆಂಬ ಶ್ರೇಷ್ಠವಾದ ಮತ್ತು ಅದನ್ನು ಒಪ್ಪುವಂತೆ ಅವರು ಕೊಟ್ಟ ನಿದರ್ಶನಗಳು ವೇದ ಪ್ರಮಾಣಗಳು ಅವರನ್ನು ಇಡೀ ಮಾನವ ಸಮುದಾಯದ ಹರಿಕಾರರೆಂದು ಸಮಾಜವು ಕೊಂಡಾಡಿತು. ಜಗತ್ತು ಮಿಥ್ಯೆ ಎಂಬ ವಾದವನ್ನು ಖಂಡ ತುಂಡು ಮಾಡಿ ಜಗತ್ತು ಸತ್ಯ ಮತ್ತು ಅದು ಭಗವಂತನ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಸರ್ವ ವೇದದ ಮೂಲಕ ಪ್ರಮಾಣ ಮಾಡಿ ಹೇಳಿದರು.
ಜೀವಕ್ಕೆ ಸಾತ್ವಿಕ ರಾಜಸ ತಾಮಸ ಎಂಬ ತ್ರಿವಿಧದ ಸ್ವಭಾವವಿದೆ ಎಂದು ಹೇಳಿದ ಪ್ರಥಮ ಗುರುಗಳು ಶ್ರೀ ಆಚಾರ್ಯರು. ಮೋಕ್ಷವೆಂಬುದು ಸರೂಪದ ಅರಿವು ಮತ್ತು ಅದರ ತಿಳುವಳಿಕೆ. ಇದನ್ನು ಬಲವಾಗಿ ಸಮರ್ಥಿಸುವ ಒಂದು ಅಂಶ ಎಂದರೆ ಬಿಂಬ- ಪ್ರತಿಬಿಂಬದ ವಿವರಣೆ. ಭಗವಂತನ ಅನುಗ್ರಹ ಮಾತ್ರದಿದಂದ ಈ ಜೀವಕ್ಕೆ ಸ್ವರೂಪೋದ್ಧಾರ ಎಂದು ಸರಳವಾಗಿ ತಿಳಿ ಹೇಳಿದರು.ಕರ್ಮದಿಂದ ಉಂಟಾಗುವ ಸುಖ ದುಖ ಗಳನ್ನೂ ವಿವರಿಸಿದ ಜಗತ್ತಿನ ಮೊದಲ ಜ್ಞಾನಿ.
ಶಂಕರಾಚಾರ್ಯರ ಪ್ರಕಾರ ಎಲ್ಲವು ಆತ್ಮ ಸ್ವರೂಪ. ಸುಖ ದುಖ ಗಳೇ ಇಲ್ಲ. ಎಲ್ಲವೂ ಬರೀ ಭ್ರಮೆ ಮಾಯೆ ಎಂದು ಹೇಳುತ್ತಾರೆ. ಹಾಗಾದರೆ ಈ ಜಗತ್ತು, ನಾವು ಪ್ರತಿನಿತ್ಯ ಕಾಣುವ ಅನುಭವಿಸುವ ವಸ್ತುಗಳು ಮಿಥ್ಯವೆಂದಾಯ್ತು. ಉದಾಹರಣೆಗೆ ಒಂದು ಹಗ್ಗವು ಹಾವಾಗಿ ಕಂಡರೆ ಅದನ್ನು ಭ್ರಮೆ ಎನ್ನುತ್ತಾರೆ ಆದರೆ ವಾಸ್ತವವಾಗಿ ಅದು ಹಗ್ಗವೇ ಆಗಿರುತ್ತದೆ. ಆಗ ಇಲ್ಲ ಇದು ಭ್ರಮೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ? ಎಲ್ಲವು ಪರಾತ್ಪರನಾದ ಪರಬ್ರಹ್ಮನ ಸ್ವರೂಪವಾದರೆ ನಮಗೆ ದುಃಖ ಏಕಾಗುತ್ತದೆ ? ಹಾಗಾದರೆ ಪರಬ್ರಹ್ಮ ತತ್ವವಾದ ಈ ಆತ್ಮಕ್ಕೆ ಅಜ್ಞಾನ ಎಂಬುದೇ ಜ್ಞಾನವೇ? ಇದಕ್ಕೆ ಉತ್ತರ ಈ ರೀತಿ ಹೇಳಿದರು. ಅನುಕಸ್ಯ ಅಜ್ಞಾನಮ್ ? ಅಂದರೆ ಯಾರಿಗೆ ಅಜ್ಞಾನ. ಕೇವಲ ತರ್ಕದಿಂದ ಅದರ ಅರ್ಥವನ್ನು ವಿವರಿಸುವ ಒಂದು ಕೆಟ್ಟ ರೀತಿಯನ್ನು ಬಿಂಬಿಸಿದ ಹಾಗಾಯ್ತು. ಇದರ ಅರ್ಥ ಅವರ ಬಳಿಯಲ್ಲಿಯೂ ಇರಲಿಲ್ಲ ಮತ್ತು ಅವರಿಗೂ ಗೊತ್ತಿರಲಿಲ್ಲ. ಪ್ರಾಯಶಃ ಆ ವರೆಗಿನ ಬಂದ ಎಲ್ಲ ಜ್ಞಾನಿ ಅಂತ ತಿಳಿದುಕೊಂಡವರಿಗೆ ಇದರ ಅರ್ಥವೇ ಗೊತ್ತಿರಲಿಲ್ಲ. ಇದನ್ನು ಜಗತ್ತಿಗೆ ಮನ ಮುಟ್ಟುವಂತೆ ಹೇಳಿದವರು ಆಚಾರ್ಯ ಶ್ರೀ ಮಧ್ವರು.ಇದರ ಬಗ್ಗೆ ಅವರು ಹೇಳಿದ ಪ್ರಥಮ ವಾಕ್ಯವೆಂದರೆ ಜೀವಿಗೆ ಕರ್ತೃತ್ವ ಎಂಬುದು ಇಲ್ಲ ಏಕೆಂದರೆ ಈ ಜೀವಿಯು ಬಿಂಬರೂಪಿಯಾದ ಭಗವಂತನ ಪ್ರತಿಬಿಂಬ.ಎಲ್ಲವೂ ಪರಾತ್ಪರನಾದ ಭಗವಂತನಿಂದಲೇ ಸಂಭವಿಸುವದು. "ತೇ ನ ವಿನಾ ತೃಣ ಮಪಿ ನ ಚಲತಿ" ಎಂದು ಘಂಟಾಘೋಷವಾಗಿ ಹೇಳಿದರು.
ಪ್ರತಿಯೊಬ್ಬ ಜೀವಿಗೂ ತನ್ನದ ಆದ ಸ್ವಭಾವವಿದೆ ಮತ್ತು ಅದು ತನ್ನ ಸ್ವರೂಪವನ್ನು ಭಗವಂತನ ಮೂಲಕವೇ ಅರಿತುಕೊಂಡು ಅನುಗ್ರಹವನ್ನು ಪಡೆದುಕೊಳ್ಳುತ್ತದೆ. ತನ್ನ ಜನ್ಮಕ್ಕೆ ಅಂಟಿದ ಕರ್ಮದ ಫಲಕ್ಕೆ ತಕ್ಕಂತೆ ಸುಖ ಮತ್ತು ದುಃಖವನ್ನು ಆ ಜೀವಿಯು ಅನುಭವಿಸುತ್ತದೆ. ತದ ನಂತರ ತನ್ನ ಪೂರ್ಣ ಸ್ವರೂಪ ಜ್ಞಾನದಿಂದ ಮೋಕ್ಷವನ್ನು ಹೊಂದುತ್ತದೆ. ಉದಾಹರಣೆಗೆ ಒಬ್ಬ ತೋಟದ ಮಾಲಿಯು ಒಂದು ಸಣ್ಣ ಬೀಜದಿಂದ ವೃಕ್ಷವನ್ನು ಬೆಳೆದು ಅನೇಕಾನೇಕ ವರ್ಷಗಳವರೆಗೆ ಫಲಗಳನ್ನು ಬೆಳೆಸುತ್ತಾನೆಯೋ ಹಾಗೆಯೇ ಭಗವಂತನು ಮೊಕ್ಷಾರ್ಹವಾದ ಸಾತ್ವಿಕ ಸ್ವಭಾವಗಳಿಂದ ಕೂಡಿದ ಜೀವರಿಗೆ ಸಾಧನೆಯನ್ನು ಮಾಡಿಸುತ್ತಾನೆ.
ಹೀಗೆ ದುರ್ವಾದಿಗಳನ್ನು ಜಯಿಸುತ್ತ ತಮ್ಮ ಅಖಂಡವಾದ ತತ್ವಜ್ಞಾನವನ್ನು ಜಗತ್ತಿನಾದ್ಯಂತ ಪಸರಿಸುತ್ತಾ ೮೦
ವರ್ಷಗಳಷ್ಟು ಕಾಲ ಶಿಷ್ಯವೃಂದಕ್ಕೆ ಚರಾಚರ ಸ್ಥಿತಿಗಳನ್ನು ವೇದೋಕ್ತವಾದ ತತ್ವಜ್ಞಾನವನ್ನು ಭಗವಂತನ ಸಾನ್ನಿಧ್ಯಕ್ಕೆ ಕೊಂಡೊಯ್ಯುವ ಸನ್ಮಾರ್ಗವನ್ನು ತೋರಿ ನಡೆದರು. -
ಒಮ್ಮೆ ಅವರು ಬದರಿ ಸಂಚಾರದಿಂದ ಬರುವಾಗ ಶೋಭನ ಭಟ್ಟರೆಂಬ ಅದ್ವೈತ ವಿದ್ವಾಂಸರೆದುರು ವಾಗ್ವಾದವಾಯಿತು. ಅವರನ್ನು ಸೋಲಿಸಿ ಹರಿ ಸರ್ವೋತ್ತಮ ವಾಯು ಜೀವೋತ್ತಮ ಎಂದು ಸಾರಿದರು. ಆಗ ಮೇಧಾವಿ ಪಂಡಿತರು ಆಚಾರ್ಯರ ಪಾದಕ್ಕೆರಗಿ ಶರಣಾದರು. ಆಗ ಆಚಾರ್ಯರು ಅವರ ವಿನಯಕ್ಕೆ ಮಾರು ಹೋಗಿ ಅವರನ್ನು ಪ್ರಿಯ ಶಿಷ್ಯರನ್ನಾಗಿ ಸ್ವೀಕರಿಸಿದ್ದಲ್ಲದೇ ಮುಂದೆ ಸನ್ಯಾಸಾಶ್ರಮವನ್ನು ನೀಡಿದರು. ಅವರೇ ಶ್ರೀ ಪದ್ಮನಾಭ ತೀರ್ಥರೆಂದು ಪ್ರಖ್ಯಾತರಾದರು. ಪ್ರಪ್ರಥಮ ಬ್ರಹ್ಮ ಸೂತ್ರ ಭಾಷ್ಯದ ಶ್ರೋತೃಗಳು ಇವರೇ ಎಂಬುದು ವಿಶೇಷ.
ಮಲ್ಪೆಯಲ್ಲಿ ಒಂದು ದಿನ ಶ್ರೀಗಳವರು ಸಮುದ್ರ ತೀರಕ್ಕೆ ಬಂದಾಗ ಅಲ್ಲಿ ಒಂದು ಹಡಗು ಮುಳುಗುತ್ತಿರುವಾಗ ಅದನ್ನು ತಮ್ಮ ತಪಶಕ್ತಿಯಿಂದ ದಡಕ್ಕೆ ಮುಟ್ಟಿಸಿದರು ಆಗ ಅದರ ಮಾಲಿಕನು ಇವರು ಕೇಳಿದ್ದನ್ನು ಕೊಡುತ್ತೆನೆನ್ನಲು ಅವನ ಹಡಗಿನಲ್ಲಿದ್ದ ಗೋಪಿ ಚಂದನದ ಗಡ್ಡೆಯಲ್ಲಿದ್ದ ಶ್ರೀ ಕೃಷ್ಣನ ವಿಗ್ರಹವನ್ನು ಬೇಡಿದರು.
ಆ ಪ್ರತಿಮೆಯನ್ನು ಉಡುಪಿಯಲ್ಲಿ ಕ್ರಿ. ಶ ೧೨೩೮ ವಿಳಂಬಿ ಸಂವತ್ಸರ ಮಾಘ ಶುಕ್ಲ ತ್ರತೀಯ ದಂದು ಪ್ರತಿಷ್ಠಾಪಿಸಿದರು.
ತಮ್ಮ ಉತ್ತರಾಧಿಕಾರಿಯಾಗಿ ಎಂಟು ಮಂದಿ ಬಾಲಸನ್ಯಾಸಿಗಳನ್ನು ವೇದಾಂತ ಪಂಡಿತರನ್ನಾಗಿ ಮಾಡಿ ಪ್ರಪಂಚದ ಉದ್ದ ಅಗಲಕ್ಕೂ ತತ್ವವಾದವನ್ನು ಪ್ರಚಾರ ಮಾಡಿದರು.ಅವರೇ ಇಂದಿಗೂ ಕೂಡ ಉಡುಪಿಯ ಅಷ್ಟ ಬಾಲ ಯತಿಗಳು ಎಂದು ಪ್ರಖ್ಯಾತಿ ಪಡೆದವರು.
ಕ್ರಿ. ಶ ೧೯೮೦ ಈಶ್ವರ ಸಂವತ್ಸರ, ಮಾಘ ಶುದ್ಧ ನವಮಿಯಂದು ಉಡುಪಿಯ ಅನಂತೆಶ್ವರನ ದೇವಸ್ಥಾನದಲ್ಲಿ ಶ್ರೀ ಮನ್ಮಧ್ವಾಚಾರ್ಯರು ಉಪನ್ಯಾಸ ಮಾಡುವಾಗ ದೇವತೆಗಳು ಪುಷ್ಪ ವೃಷ್ಟಿಗೈದರು. ತದ ನಂತರ ಅವರು ಬದರಿಗೆ ತೆರಳಿದರು.ಆ ನಂತರ ಇಂದಿನವರೆಗೂ ಅವರು ಬದರಿಕಾಶ್ರಮದಲ್ಲಿ ಶ್ರೀ ಮನ್ನಾರಯಣನ ಸೇವೆಯನ್ನು ಮಾಡುತ್ತಿದ್ದಾರೆಂದು ಪ್ರತೀತಿ.
------------- Hari Om -----------
No comments:
Post a Comment